ವೃದ್ಧೆಯ ಬೆದರಿಸಿ ದನ, ಕರು ಅಪಹರಣ
ಮಂಗಳೂರು: ಗೋಮಾಂಸಕ್ಕಾಗಿ ರಾತೋ ರಾತ್ರಿ ಮನೆಗೆ ನುಗ್ಗಿ ಮನೆಯವರನ್ನು ಬೆದರಿಸಿ ದನ ಮತ್ತು ಕರು ಹೊತ್ತೊಯ್ದಿದ್ದಾರೆ.
ಸುರತ್ಕಲ್ ಕಾನದಲ್ಲಿ ಮಹಾದೇವಿ ಎಂಬವರ ಮನೆಗೆ ಮಂಗಳವಾರ ತಡರಾತ್ರಿ 3 ಗಂಟೆ ವೇಳೆಗೆ ಟಾಟಾ ಸುಮೊ ಮತ್ತಿತರ ವಾಹನಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಮನೆ ಅಂಗಳದಲ್ಲಿ ಕಟ್ಟಿಹಾಕಿದ್ದ ದನ ಮತ್ತು ಕರುವನ್ನು ಒಯ್ದಿದ್ದಾರೆ. ಬೆನ್ನಟ್ಟಿ ಹೋದಾಗ ದುಷ್ಕರ್ಮಿಗಳು ಜೀವ ಬೆದರಿಕೆ ಒಡ್ಡಿದ್ದಾರೆ.
ಗೋವುಗಳನ್ನು ಕದಿಯುತ್ತಿದ್ದ ಖದೀಮರು ಇತ್ತೀಚೆಗೆ ಮನೆಗೆ, ಕೊಟ್ಟಿಗೆಗಳಿಗೆ ನುಗ್ಗಿ ಬಲವಂತವಾಗಿ ಗೋವುಗಳನ್ನು ಕದಿಯುತ್ತಿದ್ದಾರೆ. ಪೊಲೀಸರು ಗೋವು ಕಳ್ಳರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಿಂತ ಹೆಚ್ಚಾಗಿ ಹಿಡಿದುಕೊಡುವ ಭಜರಂಗದಳ ಕಾರ್ಯಕರ್ತರ ಮೇಲೆಯೇ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂಥ ಪ್ರಕರಣಗಳು ಹೆಚ್ಚುತ್ತಿವೆ.
ದುಷ್ಕರ್ಮಿ ಬಂಧನಕ್ಕೆ ಒತ್ತಾಯ:
ದುಷ್ಕರ್ಮಿಗಳು ಮನೆಗೆ ನುಗ್ಗಿ ದನ ಮತ್ತು ಕರುವನ್ನು ಅಪಹರಿಸಿರುವ ಪ್ರಕರಣವನ್ನು ಬಜರಂಗದಳ ಖಂಡಿಸಿದೆ.
ಬಲವಂತವಾಗಿ ಗೋವುಗಳನ್ನು ಅಪಹರಿಸುವ ಕೃತ್ಯಗಳು ಹೆಚ್ಚತ್ತಿದ್ದು, ಪೊಲೀಸರು ಕಾರ್ಯಪ್ರವೃತ್ತರಾಗಿ ದುಷ್ಕರ್ಮಿಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ಜಿಲ್ಲಾ ಸುರಕ್ಷಾ ಪ್ರಮುಖ ಪುನೀತ್ ಕುಮಾರ್ ಹೇಳಿದ್ದಾರೆ.
ವಿಹಿಂಪ ವಿಭಾಗ ಗೋರಕ್ಷಾ ಪ್ರಮುಖ ಕಟೀಲು ದಿನೇಶ್ ಪೈ, ವಿಹಿಂಪ ಜಿಲ್ಲಾ ಕಾರ್ಯಾಧ್ಯಕ್ಷ ಜಗದೀಶ ಶೇಣವ, ಜಿಲ್ಲಾ ಗೋರಕ್ಷಾ ಪ್ರಮುಖ ಪ್ರದೀಪ್ ಪಂಪ್‌ವೆಲ್, ಬಜರಂಗದಳ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್ ಸ್ಥಳಕ್ಕೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ.