ಕಾರಿನಲ್ಲೂ ಶುರುವಾಯ್ತು ಮೋದಿ ಮೇನಿಯಾ!
ಆತ್ಮಭೂಷಣ್
ಮಂಗಳೂರು: ದೇಶದ ಭವಿಷ್ಯದ ಪ್ರಧಾನಿ ಯಾರಾಗಬೇಕು ಎಂದರೆ ಥಟ್ಟನೆ ಕೇಳಿಬರುವ ಉತ್ತರ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೆಸರು. ಬಿಜೆಪಿ ವರಿಷ್ಠ ಮಂಡಳಿ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ಇನ್ನೂ ಘೋಷಿಸದಿದ್ದರೂ ದೇಶದ ಜನತೆ ತಮ್ಮ ನಿರ್ಧಾರವನ್ನು ಮುಕ್ತವಾಗಿ ತಿಳಿಸುತ್ತಿದ್ದಾರೆ. ಮಾತ್ರವಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ, ಒತ್ತಾಯಗಳನ್ನು ಹರಿಯಬಿಡುತ್ತಿದ್ದಾರೆ.
ಚುನಾವಣಾ ಸಂದರ್ಭಗಳಲ್ಲಿ ಮೋದಿ ಪ್ರಚಾರ ಸಾಮಾನ್ಯ. ಆದರೆ ಮಂಗಳೂರಿನ ಯುವ ಉದ್ಯಮಿಯೊಬ್ಬರು ಮೋದಿ ಮೋಡಿಗೆ ಒಳಗಾಗಿ ಕಾರಿಗೆ ಮೋದಿ ಸ್ಲೋಗನ್ ಸ್ಟಿಕ್ಕರ್ ರೂಪಿಸುವ ಮೂಲಕ 25 ಸಾವಿರಕ್ಕೂ ಅಧಿಕ ಮಂದಿಯ ಗಮನ ಸೆಳೆದಿದ್ದಾರೆ.
25 ಸಾವಿರಕ್ಕೂ ಅಧಿಕ ಲೈಕ್: ಮೋದಿ(ಡಿ)-ಫೈಡ್ (ಬದಲಾವಣೆಗಾಗಿ ಮೋದಿ) ಸ್ಲೋಗನ್ ಹೊಂದಿರುವ ಕಾರಿನ ಸ್ಟಿಕ್ಕರ್ನ ಚಿತ್ರವನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದಕ್ಕೆ 25,361 ಮಂದಿ ಲೈಕ್ ಮಾಡಿದರೆ, 6,976 ಮಂದಿ ಶೇರ್ ಮಾಡಿದ್ದಾರೆ. 600 ಮಂದಿ ಪ್ರತಿಕ್ರಿಯಿಸಿದ್ದಾರೆ (ಕಮೆಂಟ್) ಮಾಡಿದ್ದಾರೆ.
ಫೇಸ್ಬುಕ್ನಲ್ಲಿ ಇದನ್ನು ಮೊದಲು ಶೇರ್ ಮಾಡಿದ್ದು 'ನರೇಂದ್ರ ಮೋದಿ ಫಾರ್ ಪಿಎಂ' ಎಂಬ ಜಾಲತಾಣ ಪುಟ. ಮೋದಿ ಪ್ರಚಾರಕ್ಕಾಗಿ ಮೋದಿ ಬಳಗ ರೂಪಿಸಿರಬಹುದಾದ ಜಾಲತಾಣ ಇದು. ಇದರಿಂದಾಗಿ ಒಮ್ಮಿಂದೊಮ್ಮೆಲೆ ಇಲ್ಲಿನ ಮಂಗಲ್ಪಾಡಿ ನರೇಶ್ ಶೆಣೈ ಜನಪ್ರಿಯರಾಗಿದ್ದಾರೆ. ಅಲ್ಲದೆ ಇವರ ಕಲ್ಪನೆಯ ಸ್ಟಿಕ್ಕರ್ಗೆ ಭಾರಿ ಬೇಡಿಕೆ ಬಂದಿದೆ. ಇವರು ತಮ್ಮದೇ ಟೊಯೊಟಾ ಇನೋವಾ ಕಾರಿಗೆ ಮೋದಿ ಸ್ಟಿಕ್ಕರ್ ಅಂಟಿಸಿದ್ದಾರೆ. ಎಲ್ಲೆಂದರಲ್ಲಿ ಸಂಚರಿಸುವಾಗ ಕಾರಿನ ಹಿಂಬದಿಯಲ್ಲಿ ಮೋದಿ ಮೋಡಿ ಕಾಣುತ್ತಿದೆ.
ಸ್ಲೋಗನ್ಗಳ ಸ್ಯಾಂಪಲ್...: ಐ ವಾಂಟ್ ಮೈ ನೇಷನ್ ಟು ಬಿ 'ಮೋದಿ(ಡಿ)ಫೈಡ್'(ಬದಲಾವಣೆ) ಡು ಯು?, ಇಂಡಿಯಾ ನೀಡ್ಸ್ 'ಮೋದಿ-ಫಿಕೇಶನ್', ಮೋದಿ ಲಾವೋ ದೇಶ್ ಬಚಾವೋ.. ಹೀಗೆ ವಿವಿಧ ರೀತಿಯ ಸ್ಲೋಗನ್ಗಳನ್ನು ನರೇಶ್ ಬರೆಸಿದ್ದಾರೆ. ಮೋದಿ ಮೋಡಿಗೆ ಒಳಗಾಗಿ ಸುಮ್ಮನೆ ರಚಿಸಿದ ಸ್ಟಿಕ್ಕರ್ ಭಾರಿ ಪ್ರಮಾಣದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತದೆ ಎಂದು ನರೇಶ್ ಯೋಚಿಸಿರಲಿಲ್ಲ. ಈ ಸ್ಟಿಕ್ಕರ್ನ್ನು ತಯಾರಿಸಿದವರು ಮಿತ್ರ ನರೇಶ್ ಪ್ರಭು.
ಇದು ಟಿಂಟೆಡ್ ಗ್ಲಾಸ್ ಸ್ಟಿಕ್ಕರ್ ಅಲ್ಲ, ಕಾರಿನ ಹಿಂಬದಿ ಸ್ಟಿಕ್ಕರ್ ಅಂಟಿಸಿದರೂ ಪಾರದರ್ಶಕವಾಗಿದೆ. ಆದ್ದರಿಂದ ಟಿಂಟ್ಗ್ಲಾಸ್ ನಿರ್ಬಂಧ ಇದಕ್ಕೆ ಅನ್ವಯವಾಗದು ಎನ್ನುತ್ತಾರೆ ನರೇಶ್. ಮೋದಿ ಚಿತ್ರ ಅಚ್ಚುಹಾಕಿಸಿದ ಟೀ ಶರ್ಟ್ನ್ನು ಇವರು ಹೊರತಂದಿದ್ದು, 10 ಟೀಶರ್ಟ್ ಸಿದ್ಧಗೊಂಡಿವೆ.
ಮೋದಿ ಸ್ಟಿಕ್ಕರನ್ನು ಕಾರಿಗೆ ಅಳವಡಿಸುವಂತೆ ಕೋರಿ ಅನೇಕರು ದೂರದೂರುಗಳಿಂದ ಫೇಸ್ಬುಕ್, ಫೋನ್ ಮುಖೇನ ಸಂಪರ್ಕಿಸಿದ್ದಾರೆ. ಸದ್ಯಕ್ಕೆ ಮಂಗಳೂರಲ್ಲಿ ತನ್ನೊಬ್ಬನ ಕಾರಲ್ಲಿ ಮಾತ್ರ ಮೋದಿ ಸ್ಟಿಕ್ಕರ್ ಇದೆ ಎನ್ನುತ್ತಾರೆ ನರೇಶ್ (9448123933). ನರೇಶ್ ಬಿಜೆಪಿಯ ಸಕ್ರಿಯ ಕಾರ್ಯಕರ್ತರಲ್ಲ, ಬಿಜೆಪಿ, ಮೋದಿ ಅಭಿಮಾನಿಯಾಗಿದ್ದಾರೆ.