ಪ್ರತಿ ವರ್ಷ ಕಾಲ ತೀರದ ಸಂಪರ್ಕ ಗೋಳು
ಸುಬ್ರಹ್ಮಣ್ಯ: ಪ್ರತಿ ಮಳೆಗಾಲವೂ ಮುಳುಗಡೆಯಾಗಿ ಜನ ಜೀವನ ಅಸ್ತವ್ಯಸ್ಥಗೊಳ್ಳುವ ಕುಕ್ಕೆ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಕುಮಾರಧಾರ ಮುಳುಗು ಸೇತುವೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.
ಈ ಸೇತುವೆ ಮೇಲ್ದರ್ಜಗೇರಿಸುವ ಜನಪ್ರತಿನಿಧಿಗಳ ಆಶ್ವಾಸನೆ ತುಕ್ಕು ಹಿಡಿದು ಪಾತಾಳ ಸೇರಿದೆ. ಇಲ್ಲಿ ಮತ್ತೆ ಈ ಬಾರಿ ಸಮಸ್ಯೆಗಳು ಬಾಯ್ತೆರೆದುಕೊಂಡಿವೆ. ಈ ಮಳೆಗಾಲವೂ ಸತತ ಮಳೆಯಾದರೆ ಸುಬ್ರಹ್ಮಣ್ಯ ದ್ವೀಪಸದೃಶವಾಗುವ ಗೋಳು ಮುಂದುವರೆಯಲಿದೆ.
ಸಮಸ್ಯೆ ಏನು?: ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವನ್ನು ಗುಂಡ್ಯ ಹಾಗೂ ಉಪ್ಪಿನಂಗಡಿ ಮಾರ್ಗವಾಗಿ ಸಂಪರ್ಕಿಸುವ ರಸ್ತೆಯಲ್ಲಿ ಕುಮಾರಧಾರ ನದಿಗೆ ಅಡ್ಡಲಾಗಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ಈ ಸೇತುವೆಯಿದೆ.
ಈ ಸೇತುವೆ ದೇವಸ್ಥಾನದ ಹತ್ತಿರದಲ್ಲೇ ಇದೆ. ಸ್ವಾತಂತ್ರ್ಯಪೂರ್ವದ ಈ ಸೇತುವೆ ಮಳೆಗಾಲದಲ್ಲಿ ಮುಳುಗಡೆಯಾಗುತ್ತಿರುವುದು ಸಾಮಾನ್ಯ. ಮಳೆಗಾಲದಲ್ಲಿ ಘಟ್ಟ ಪ್ರದೇಶದಿಂದ ಭಾರಿ ಮಳೆಯ ಪರಿಣಾಮ ಈ ನದಿ ಉಕ್ಕಿ ಹರಿಯುತ್ತದೆ.
ಯಥೇಚ್ಛವಾಗಿ ಈ ನದಿಯಲ್ಲಿ ನೀರು ಹರಿದು ಬರುವುದರಿಂದ ತಗ್ಗಿನಲ್ಲಿರುವ ಈ ಸೇತುವೆಯೂ ಮುಳುಗಡೆಯಾಗುತ್ತದೆ. ಇದರಿಂದ ಕ್ಷೇತ್ರಕ್ಕೆ ಬರುವ ದೂರದ ಯಾತ್ರಾರ್ಥಿಗಳು ಸೇರಿದಂತೆ ಜನಸಾಮಾನ್ಯರು, ಶಾಲಾ ಮಕ್ಕಳು ತೀವ್ರ ತೊಂದರೆಗೊಳಗಾಗುತ್ತಾರೆ.
ಸಂಪರ್ಕ ಕಡಿತ: ವರ್ಷದಲ್ಲಿ ಹತ್ತಾರು ಬಾರಿ ಮುಳುಗಿ ರಾಜ್ಯದಲ್ಲಿಯೇ ಸುದ್ದಿ ಮಾಡುವ ಈ ಸೇತುವೆ ಮುಳುಗಡೆಯಾದಾಗ ಕೆಲವೊಮ್ಮೆ 2- 3 ದಿನಗಳ ಕಾಲ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ಥಗೊಳ್ಳುತ್ತದೆ. ಪ್ರಯಾಣಿಕರು ರಸ್ತೆಯ ಇಕ್ಕೆಲಗಳಲ್ಲಿ ತಾಸು ಗಟ್ಟಲೆ ಕಾಯುವುದಲ್ಲದೆ, ಕ್ಷೇತ್ರ ಇಡೀ ಸಂಪರ್ಕವನ್ನೇ ಕಡಿದುಕೊಂಡು ಬಿಡುತ್ತದೆ.
ಭಕ್ತರಿಗೂ ಸಂಕಟ: ಹೊರಗಿನಿಂದ ಬರುವ ಭಕ್ತರು ನದಿಯ 2 ಬದಿಗಳಲ್ಲಿ ಉಳಿದುಕೊಂಡು ತೊಂದರೆ ಅನುಭವಿಸುತ್ತಾರೆ. ವಸತಿ ವ್ಯವಸ್ಥೆಗಳಿಗೂ ಸಂಕಟ ಪಡುತ್ತಾರೆ. ಕ್ಷೇತ್ರಕ್ಕೆ ರೈಲಿನಲ್ಲಿ ಬರುವವರು ಈ ಸೇತುವೆ ದಾಟಿಯೇ ಕ್ಷೇತ್ರ ತಲುಪಬೇಕು. ಹಾಗಾಗಿ ಇವರಿಗೂ ಸಂಚಾರ ಕಷ್ಟವಾಗುತ್ತದೆ.
ನೆಟ್ಟಣ, ಮರ್ಧಾಳ, ಇಚಿಲಂಪಾಡಿ, ಗುಂಡ್ಯ, ಕಡಬ, ಧರ್ಮಸ್ಥಳ ಮಾರ್ಗವಾಗಿ ಸಂಚರಿಸುವ ಬೆಂಗಳೂರು, ಹಾಸನ, ಮಂಗಳೂರು ಮುಂತಾದ ದೂರದ ಊರಿನವರು ಸೇರದಂತೆ ಎಲ್ಲರೂ ಈ ಮುಳುಗು ಸೇತುವೆಯಿಂದ ತ್ರಾಸ ಪಡಬೇಕಾಗುತ್ತದೆ.
ಶಾಲಾ ಕಾಲೇಜುಗಳು ಆರಂಭ ಮತ್ತು ಬಿಡುವ ಸಂದರ್ಭ ಸೇತುವೆ ಮುಳುಗಡೆಯಾದಲ್ಲಿ ವಿದ್ಯಾರ್ಥಿಗಳು ಮನೆ ತಲಪುವಲ್ಲಿ ತೀವ್ರ ಅನನುಕೂಲವಾಗುತ್ತದೆ.
ಕಿಂಡಿ ಅಣೆಕಟ್ಟು: ಈ ಸೇತುವೆ ಕೆಳ ಭಾಗದಲ್ಲಿ ದೇವಳದ ವತಿಯಿಂದ ಸ್ನಾನಘಟ್ಟ ನಿರ್ಮಿಸಿ ಭಕ್ತರ ಸ್ನಾನ ಇತ್ಯಾದಿಗೆ ಅನುಕೂಲ ಮಾಡಿಕೊಡಲಾಗಿದೆ. ಇಲ್ಲೇ ಸಮೀಪ ಈ ವರ್ಷ ಸಣ್ಣ ನೀರಾವರಿ ಇಲಾಖೆ ವತಿಯಿಂದ ಕಿಂಡಿ ಅಣೆಕಟ್ಟು ನಿರ್ಮಿಸಿ ಬೇಸಿಗೆ ಕಾಲದಲ್ಲಿ ನೀರು ತುಂಬುವಂತೆ ವ್ಯವಸ್ಥೆ ಮಾಡಲಾಗಿದೆ.
ಕಿಂಡಿ ಅಣೆಕಟ್ಟಿನ ಮೇಲೆ ಅಳವಡಿಸಲಾದ ಹಲಗೆಗಳನ್ನು ಮಳೆಗಾಳದಲ್ಲಿ ತೆಗೆಯಲಾಗುತ್ತದೆಯಾದರೂ ಮತ್ತು ಈಗಾಗಲೇ ಬೇಸಿಗೆಯಲ್ಲಿ ನದಿಯ ಹೂಳೆತ್ತುವ ಕಾರ್ಯ ನಡೆಸಲಾಗುತ್ತಿದೆ.
ಆದರೂ, ಕಿಂಡಿಅಣೆಕಟ್ಟು ನಿರ್ಮಾಣಕ್ಕೆ ಹಾಕಲಾದ ಕಂಬಗಳ ಜೋಡಣೆಯಿಂದ ನೀರಿನ ಸರಾಗ ಹರಿಯುವಿಕೆಗೆ ತಡೆಗಟ್ಟಿದಂತಾಗಿ ಜಲಮಟ್ಟ ಹೆಚ್ಚುಗೊಂಡು ಈ ಮಳೆಗಾಲದ ಸಮಯ ಮತ್ತಷ್ಟು ಕಾಲ ಸೇತುವೆ ಮಳುಗಡೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು.
ರಾಜಕೀಯ ಇಚ್ಚಾಶಕ್ತಿ ಕೊರತೆ: ಕುಮಾರಾಧಾರ ಮುಳುಗು ಸೇತುವೆಯನ್ನು ಮೇಲ್ದರ್ಜಗೇರಿಸುವ ಕುರಿತು ಆಗೊಮ್ಮೆ ಈಗೊಮ್ಮೆ ಪ್ರಸ್ತಾವಗಳು ಕೇಳಿ ಬಂದಿದ್ದರೂ ಕ್ರಮೇಣ ಮೂಲೆ ಸೇರಿವೆ. ಕೆಲಸ ಕಾರ್ಯಗಳು ನಿಧಾನಗತಿಯಿಂದಾಗಿ ನಿರಂತರವಾಗಿ ಸಮಸ್ಯೆಗೆ ಪರಿಹಾರವೇ ಇಲ್ಲದಂತಾಗಿದೆ.
-ಬಾಲಕೃಷ್ಣ ಭೀಮಗುಳಿ