ಈ ರಸ್ತೆಯಲ್ಲಿ ನಡೆಯುವುದೇ ಯಮಯಾತನೆ!
ವಿಟ್ಲ: ರಸ್ತೆ ಮೇಲೆ ಚರಂಡಿ ಮಣ್ಣು, ಮೂಗು ಮುಚ್ಚಿಕೊಂಡೇ ನಡೆದಾಡಬೇಕು!
ವಿಟ್ಲ: ವಿಟ್ಲ- ಪುತ್ತೂರು ರಸ್ತೆಯಲ್ಲಿರುವ ಚರಂಡಿಯ ಮಣ್ಣನ್ನು ರಸ್ತೆ ಬದಿಯಲ್ಲಿ ಹಾಕಿದ್ದರ ಪರಿಣಾಮ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ನಡೆದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಶನಿವಾರ ವಿಟ್ಲ ಗ್ರಾಮ ಪಂಚಾಯಿತಿ ವತಿಯಿಂದ ಚರಂಡಿ ಹೂಳೆತ್ತುವ ಕಾರ್ಯ ನಡೆದಿತ್ತು. ಈ ಸಂದರ್ಭ ವಿಟ್ಲ- ಪುತ್ತೂರು ರಸ್ತೆ ಬದಿಯಲ್ಲಿ ಚರಂಡಿಯ ಕೊಳಚೆ ಜೇಡಿ ಮಣ್ಣು ಹಾಕಲಾಗಿತ್ತು. ಈ ನಡುವೆ ಭಾನುವಾರ ಬೆಳಗ್ಗೆ ಸುರಿದ ಭಾರಿ ಮಳೆಯ ಪ್ರಭಾವದಿಂದ ಚರಂಡಿಯಲ್ಲಿ ಹರಿಯಬೇಕಾಗಿದ್ದ ಕೊಳಚೆ ಮಿಶ್ರಿತ ನೀರು ರಸ್ತೆಯಲ್ಲಿ ಹರಿದು ಸಾರ್ವಜನಿಕರಿಗೆ ತೊಂದರೆ ನೀಡಿತಲ್ಲದೆ ರಸ್ತೆ ಸಂಪೂರ್ಣವಾಗಿ ಕೆಸರುಮಯವಾಗಿ ಮಾರ್ಪಟ್ಟಿದೆ. ವಿಟ್ಲ ಖಾಸಗಿ ಬಸ್ಸು ನಿಲ್ದಾಣದಿಂದ ಪುತ್ತೂರು ಮಾರ್ಗವಾಗಿ ಸಾಗುವ ಪಾದಚಾರಿಗಳು ಕೆಸರು ಮಣ್ಣಿನ ದುರ್ನಾತಕ್ಕೆ ರೋಸಿ ಹೋಗಿದ್ದಾರೆ. ರಸ್ತೆ ಕಿರಿದಾದ ಪರಿಣಾಮ ವಾಹನ ಚಾಲಕರು ಪರಸ್ಪರ ದಾರಿ ಬಿಡುವ ಸಂದರ್ಭ ಯಾತನೆ ಅನುಭವಿಸಿದರು. ಭಾನುವಾರ ಪಟ್ಟಣದಲ್ಲಿ ಜನಸಂಖ್ಯೆ ವಿರಳವಾಗಿದ್ದರಿಂದ ಇದು ಜನರಿಗೆ ಅಷ್ಟೇನೂ ಪರಿಣಾಮ ಬೀಳಲಿಲ್ಲ. ಮಂಗಳವಾರ ವಾರದ ಸಂತೆ, ಸೋಮವಾರ ವಿವಿಧ ಕಾರ್ಯಕ್ರಮಗಳು ಇರುವುದರಿಂದ ವಿಟ್ಲ ಪಟ್ಟಣದ ಈ ರಸ್ತೆಯಲ್ಲಿ ಅಧಿಕ ಜನಸಂಖ್ಯೆಯಿದ್ದು, ಈ ಕೆಸರಿನಿಂದ ಮತ್ತಷ್ಟು ಭೀತಿ ಆವರಿಸುವಲ್ಲಿ ಯಾವುದೇ ಸಂಶಯವಿಲ್ಲ.