ಒಂದೇ ಕುಟುಂಬದ ನಾಲ್ಕು ಮಂದಿ ಸಾವು
ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್ಸು ಮತ್ತು ಜೀಪ್ ಡಿಕ್ಕಿಯಾಗಿ ಪುರಸಭಾ ಸದಸ್ಯೆ ಲೀನಾ ಮಸ್ಕರೇನಸ್ ಸಹಿತ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಮಾಣಿ- ಮೈಸೂರು ರಾಜ್ಯ ಹೆದ್ದಾರಿಯ ಆರ್ಯಾಪು ಗ್ರಾಮದ ಸಂಟ್ಯಾರು ಸೇತುವೆ ಬಳಿ ಭಾನುವಾರ ಸಂಜೆ ನಡೆದಿದೆ. ಪುತ್ತೂರಿನ ಬೈಪಾಸ್ ತೆಂಕಿಲ ನಿವಾಸಿಗಳಾದ ಪುತ್ತೂರು ಪುರಸಭಾ ಸದಸ್ಯೆ ಲೀನಾ ಮಸ್ಕರೇನಸ್ (46), ಅವರ ಪತಿ- ಪುತ್ತೂರು ಸಂತ ಫಿಲೋಮಿನಾ ಪ್ರೌಢಶಾಲೆ ಸಿಬ್ಬಂದಿ ಪೀಟರ್ ಮಸ್ಕರೇನಸ್ (50), ಪುತ್ರ ಮಾದೇ ದೇವುಸ್ ಶಾಲೆಯ ವಿದ್ಯಾರ್ಥಿ ಪ್ರಿತೇಶ್ ಮಸ್ಕರೇನಸ್ (13) ಮತ್ತು ಪೀಟರ್ ಅವರ ಸಹೋದರ ಅಂತೋನಿ ಮಸ್ಕರೇನಸ್ (42) ಮೃತರು. ಪೀಟರ್ ಅವರ ಇನ್ನೋರ್ವ ಪುತ್ರ ಪ್ರೀತಂ ಮಸ್ಕರೇನಸ್ (17) ಮತ್ತು ಸಹೋದರ ಜೋಸೆಫ್ ಮಸ್ಕರೇನಸ್ ಎಂಬವರ ಪುತ್ರಿ ಜೋಸ್ಲಿನ್ ಮಸ್ಕರೇನಸ್ ಗಾಯಗೊಂಡಿದ್ದು, ಅವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೀಟರ್ ಮಸ್ಕರೇನಸ್ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದೆ.