ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕರಾವಳಿಯಲ್ಲಿ ಮುಂಗಾರು ಮುನ್ನಡೆ..

Mainashree
Updated On : 3 Jun 2013, 10:25 am

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಸೇರಿದಂತೆ ಕರಾವಳಿಗೆ ಜೂನ್ ಆರಂಭದಲ್ಲೇ ಕಾಲಿಟ್ಟಿರುವ ಮುಂಗಾರು ಮಳೆಯ ಅಬ್ಬರ ಆರಂಭವಾಗಿದೆ. ಹವಾಮಾನ ಇಲಾಖೆ ನುಡಿದಂತೆ ಎಡೆಬಿಡದ ಮಳೆ ಪ್ರಾರಂಭವಾಗಿದ್ದು, ಕೃಷಿ ಚಟುವಟಿಕೆಗೆಗಳಿಗೆ ಮುಂಗಾರು ಮುನ್ನುಡಿ ಬರೆದಿದೆ.
ಭಾನುವಾರ ಹಗಲು ಜಿಲ್ಲೆಯಲ್ಲಿ ಸುರಿದ ಮಳೆ ಕೆಲವು ಕಡೆ ಆಘಾತ, ಅಪಘಾತಗಳನ್ನು ಉಂಟುಮಾಡಿದೆ. ಕಳೆದ ಕೆಲವು ದಿನಗಳಿಂದ ಆಗಾಗ ಕಾಣಿಸಿಕೊಂಡಿದ್ದ ಮಳೆ ಈಗ ಮುಂಗಾರಿಗೆ ಪರಿವರ್ತನೆಗೊಂಡಿರುವುದರಿಂದ ಅಧಿಕೃತ ಮಳೆಗಾಲಕ್ಕೆ ಶ್ರೀಕಾರ ಹಾಕಿದಂತಾಗಿದೆ. ಮಂಗಳೂರು ಸೇರಿದಂತೆ ಜಿಲ್ಲೆಯ ಹಲವೆಡೆ ಚರಂಡಿ ಅವ್ಯವಸ್ಥೆ ಹಾಗೂ ಹೊಸ ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದು, ರಸ್ತೆ ಮೇಲೆಯೇ ಮಳೆ ನೀರು ಹರಿದು ಹೋಗುತ್ತಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.
ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು: ಪ್ರತಿ ವರ್ಷದಂತೆ ಈ ಬಾರಿಯೂ ನಗರ ವ್ಯಾಪ್ತಿಯ ತಗ್ಗು ಪ್ರದೇಶಗಳಿಗೆ ಮಳೆನೀರು ನುಗ್ಗಿದೆ. ಪತ್ತುಮುಡಿ ಸೌಧ ಬಳಿ ರಸ್ತೆಯಲ್ಲಿ ನೀರು ಸಂಗ್ರವಾಗಿ ಸಂಚಾರಕ್ಕೆ ಅಡಚಣೆ ಆಗಿದೆ. ಪಡೀಲು, ಬಜಾಲ್, ಎಕ್ಕೂರು, ಕಣ್ಣೂರು, ಜೆಪ್ಪಿನಮೊಗರು, ಮಾಂಕಾಳಿಪಡ್ಪುಗಳ ತಗ್ಗು ಪ್ರದೇಶಗಳು ಜಲಾವೃತ ಸನಿಹಕ್ಕೆ ಬಂದಿವೆ. ಮನೆಗೆ ನೀರು ನುಗ್ಗಿದ ಪ್ರದೇಶಗಳಿಗೆ ಕಂಕನಾಡಿ ವಾರ್ಡ್ ಸದಸ್ಯ ಪ್ರವೀಣ್‌ಚಂದ್ರ ಆಳ್ವ ಆಗಮಿಸಿ ಚರಂಡಿಯಲ್ಲಿ ಸಮರ್ಪಕ ನೀರು ಹರಿವಿಗೆ ಪಾಲಿಕೆ ಸಿಬ್ಬಂದಿಗೆ ಸೂಚಿಸಿದರು. ಈ ವೇಳೆ ಸ್ಥಳೀಯರು ಸದಸ್ಯರನ್ನು ತರಾಟೆಗೆ ಗುರಿಪಡಿಸಿದ ವಿದ್ಯಮಾನ ನಡೆಯಿತು.
ಗೋಡೆ ಕುಸಿದು ಕಾರು ಜಖಂ: ನಾಗುರಿಯ ಗುಡ್ಡೆತೋಟದಲ್ಲಿ ಗೋಡೆ ಆವರಣ ಕುಸಿದು ಸಂಧ್ಯಾರಾಜ್ ಎಂಬವರ ಮಾರುತಿ ಕಾರು ಜಖಂಗೊಂಡಿದೆ. ಧಾರಾಕಾರ ಮಳೆಗೆ ಈ ಅನಾಹುತ ಉಂಟಾಗಿದೆ. ಜೆಪ್ಪುವಿನಲ್ಲಿ ಪದ್ಮನಾಭ ಎಂಬವರ ಮನೆಯ ಆವರಣ ಗೋಡೆ ಕುಸಿದು ಪಕ್ಕದ ರಹೀಂ ಮನೆಗೆ ನೀರು ನುಗ್ಗಿದೆ. ನಂತರ ಪಾಲಿಕೆ ಸಿಬ್ಬಂದಿ ಆಗಮಿಸಿ ನೀರನ್ನು ತೆರವುಗೊಳಿಸುವ ಕಾರ್ಯ ನಡೆಸಿದರು.
ಪಾಲಿಕೆ ತಂಡ ಕಾರ್ಯಾಚರಣೆ: ಅತ್ತಾವರ ಅಧೀಶ್ ಅಪಾರ್ಟ್‌ಮೆಂಟ್ ಬಳಿ ನರಸಿಂಹ ರಾವ್‌ರ ಜಾಗಕ್ಕೆ ನೀರು ನುಗ್ಗಿದ್ದು, ಜೆಸಿಬಿ ಮುಖೇನ ಪರಿಹಾರ ಕಾರ್ಯ ಕೈಗೊಳ್ಳಲಾಯಿತು.
   ಮಂಗಳಾದೇವಿಯ ಮಂಗಳಾ ನಗರದಲ್ಲಿ ಬಿಲ್ಡರ್ ಒಬ್ಬರು ಚರಂಡಿಗೆ ಕಟ್ಟಡ ನಿರ್ಮಾಣದ ಬೇಡದ ಸಾಮಗ್ರಿ ಹಾಕಿದ ಪರಿಣಾಮ ಚರಂಡಿ ಬ್ಲಾಕ್ ಆಗಿ ರಸ್ತೆ ಹಾಗೂ ಸಮೀಪದ ಮನೆಗೆ ನುಗ್ಗಿತ್ತು. ಅಲ್ಲಿಯೂ ಜೆಸಿಬಿ ಕಾರ್ಯಾಚರಣೆ ನಡೆಸಲಾಯಿತು. ಸುಭಾಸ್‌ನಗರ ಬಳಿ ಮಹಿಳೆಯೊಬ್ಬರ ಹರಿವ ನೀರಿಗೆ ತಡೆಒಡ್ಡಿದ್ದರಿಂದ ನೀರು ಶೇಖರಣೆಗೊಂಡು ಬ್ಲಾಕ್ ಆಗಿತ್ತು. ಕೃತಕ ನೆರೆ ಭೀತಿ ಹಿನ್ನಲೆಯಲ್ಲಿ ಪೊಲೀಸ್ ನೆರವಿನಲ್ಲಿ ಜೆಸಿಬಿ ಕಾರ್ಯಾಚರಣೆ ನಡೆಯಿತು.
ಪಾಲಿಕೆ ಮಾಜಿ ಸದಸ್ಯೆ ಜೆಸಿಂತ ಬೊರೊಮಿಯಾ ಮನೆಗೆ ತೋಡಿನ ನೀರು ನುಗ್ಗಿದ್ದು, ಪಾಲಿಕೆ ತಂಡ ನೀರನ್ನು ಹೊರಹಾಕುವ ಕಾರ್ಯಾಚರಣೆ ನಡೆಸಿತು. ತೋಡಿನಲ್ಲಿ ಹೂಳು ತುಂಬಿದ್ದರಿಂದ ನೀರು ಮನೆಗೆ ಬಂದಿತ್ತು. ಪಂಪ್‌ವೆಲ್‌ನ ಇಂಡಿಯಾ ಆಸ್ಪತ್ರೆ ಬಳಿ ಹೆದ್ದಾರಿ ಮಧ್ಯೆ ಮಳೆನೀರು ತುಂಬಿರುವುದನ್ನು ಸರಿಪಡಿಸಲಾಗಿದ್ದು, ಚರಂಡಿಗೆ ಹರಿಯುವಂತೆ ಮಾಡಲಾಗಿದೆ. ಆದರೆ ಚರಂಡಿಯಲ್ಲಿ ಹೂಳು ತುಂಬಿದ್ದು, ಅದನ್ನು ಸೋಮವಾರ ತೆರವುಗೊಳಿಸಲಾಗುವುದು ಎಂದು ಪಾಲಿಕೆ ಜಂಟಿ ಆಯುಕ್ತ ಶ್ರೀಕಾಂತ್ ರಾವ್ ತಿಳಿಸಿದ್ದಾರೆ.
ಬಂಟ್ವಾಳದಲ್ಲಿ ಗರಿಷ್ಠ ಮಳೆ: ಜಿಲ್ಲೆಯ ಬಂಟ್ವಾಳದಲ್ಲಿ ಗರಿಷ್ಠ 29 ಮಿಲಿ ಮೀಟರ್ ಮಳೆ ದಾಖಲಾಗಿದೆ. ಬಜ್ಪೆ ಮತ್ತು ಮಂಗಳೂರಲ್ಲಿ ತಲಾ 15.8 ಮಿ.ಮೀ, ಪುತ್ತೂರು 11 ಮಿ.ಮೀ, ಬೆಳ್ತಂಗಡಿ 2.8 ಮಿ.ಮೀ, ಉಪ್ಪಿನಂಗಡಿ 5 ಮಿ.ಮೀ, ಸುಳ್ಯ 12.2 ಮಿ.ಮೀ ಮಳೆ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement