ಗುಟ್ಕಾ ನಿಷೇಧಿಸಿ ಯುವಕರ ಪ್ರಾಣ ಉಳಿಸಿದ್ದೇವೆ: ಖಾದರ್
ಮಂಗಳೂರು: ದೇಶದಲ್ಲಿ 20 ರಾಜ್ಯಗಳು ಗುಟ್ಕಾ ನಿಷೇಧಿಸಿದರೂ ಹಿಂದಿನ ರಾಜ್ಯ ಸರ್ಕಾರಗಳು ಬೃಹತ್ ಕಂಪನಿಗಳ ಲಾಬಿಗೆ ಮಣಿದು ಗುಟ್ಕಾ ನಿಷೇಧ ಜಾರಿಗೊಳಿಸಿರಲಿಲ್ಲ. ಈಗ ನಾವು ಧೈರ್ಯದಿಂದ ಮಾಡಿದ್ದೇವೆ. ಇದನ್ನು ಹಿಂಪಡೆಯವ ಪ್ರಶ್ನೆಯೇ ಇಲ್ಲ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, 20ರಿಂದ 40 ವರ್ಷದೊಳಗಿನ ಯುವಕರು ಗುಟ್ಕಾ ಚಟಕ್ಕೆ ಬೀಳುತ್ತಾರೆ. ಅಂಥವರ ಪ್ರಾಣ ಉಳಿಸಿದ್ದೇವೆ. ಇದರಿಂದ ಎಷ್ಟೋ ಕುಟುಂಬಗಳು ಸಂತಸವಾಗಿವೆ. ರೈತರು ಮೊದಲು ಗುಟ್ಕಾ ಪ್ಯಾಕ್ ತೆರೆದು ನೋಡಲಿ. ಅಲ್ಲಿ ಅಡಕೆಗಿಂತ ವಿಷವೇ ಹೆಚ್ಚಿದೆ. ಜತೆಗೆ ಅಡಕೆ ಬೆಳೆಗಾರರು ಆತಂಕ ಪಡುವ ಅಗತ್ಯ ಇಲ್ಲ. ಸರ್ಕಾರ ಅವರ ಬೆಂಬಲಕ್ಕಿದೆ. ರಾಜ್ಯದ ಎಲ್ಲ ಶಾಲೆಗಳಲ್ಲಿ ಡೆಂಘೀ ತಪಾಸಣೆ ಕೇಂದ್ರ ಆರಂಭಿಸಲಾಗುವುದು. ಜ್ವರದಿಂದ ಬಳಲುತ್ತಿದ್ದವರು ತಕ್ಷಣ ತಪಾಸಣೆ ಮಾಡಿಕೊಳ್ಳಬೇಕು ಎಂದರು.