ಗೂಡಂಗಡಿಯಲ್ಲಿ ಮದ್ಯ ಮಾರಾಟ!
ಮಂಗಳೂರು: ದಲಿತ ಕಾಲನಿಗಳಲ್ಲಿ ಪೊಲೀಸರು ತಿಂಗಳಿಗೊಂದು ಬಾರಿಯಾದರೂ ರಾತ್ರಿ ವೇಳೆ ಗಸ್ತು ತಿರುಗಬೇಕು ಎಂದು ದಲಿತ ಮುಖಂಡ ಗೋಪಾಲ ಕಾಡುಮಠ ಒತ್ತಾಯಿಸಿದ್ದಾರೆ.
ಭಾನುವಾರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ, ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ಕಾಡುಮಠ ದಲಿತ ಕಾಲನಿಯಲ್ಲಿ ರಾತ್ರಿ ವೇಳೆ ಕೆಲವರು ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದು, ಗಸ್ತು ತಿರುಗಬೇಕು ಎಂದು ಹೇಳಿದರು.
ವಿಶ್ವನಾಥ್ ಚಂತಿಮಾರ್ ಮಾತನಾಡಿ, ಕೆಲವು ಗೂಡಂಗಡಿಗಳಲ್ಲಿ ಮದ್ಯ ಮಾರಾಟವಾಗುತ್ತಿದ್ದು, ಪರಿಣಾಮ ಸುಲಭವಾಗಿ ಲಭಿಸುತ್ತಿದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಎಸ್ಪಿ ಅಭಿಷೇಕ್ ಗೊಯಲ್ ಮಾತನಾಡಿ, ಗೂಡಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಯುವತಿಗೆ ವಂಚನೆ: ದಲಿತ ಮುಖಂಡ ಪಿ. ಕೇಶವ, ವಿಟ್ಲ ಠಾಣೆ ವ್ಯಾಪ್ತಿಯ ಯುವತಿಯೊಬ್ಬಳಿಗೆ ಬಸ್ ಏಜೆಂಟನೊಬ್ಬ ಮದುವೆಯಾಗುವುದಾಗಿ ನಂಬಿಸಿದ್ದು, ಈಗ ಆಕೆ ಮಗು ಜನ್ಮ ನೀಡಿದ್ದಾಳೆ. ಈ ಪ್ರಕರಣದ ಕುರಿತು ದೂರು ನೀಡಿದ್ದು, ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಎಸ್ಪಿ, ಇಂಥ ಪ್ರಕರಣಗಳನ್ನು ವಂಚನೆ ಎಂಬುವುದಾಗಿ ದಾಖಲಿಸಲಾಗುತ್ತದೆ. ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಚರ್ಚೆ ನಡೆಸಿದ್ದು, ಅವಿವಾಹಿತ ಯುವತಿಯರು ದಾಖಲಾದ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ ಎಂದರು.
ದಲಿತ ಮುಖಂಡ ಎಸ್.ಪಿ. ಆನಂದ್ ಮಾತನಾಡಿ, ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಯುವತಿಯೊಬ್ಬಳಿಗೆ ಸ್ಥಳೀಯ ನಿವಾಸಿ ವಿಶ್ವನಾಥ ಎಂಬಾತ ಅತ್ಯಾಚಾರ ನಡೆಸಿದ ಕುರಿತು ಏ. 19 ರಂದು ದೂರು ನೀಡಲಾಗಿತ್ತು. ಆದರೆ ಇಲ್ಲಿಯವರೆಗ ಆರೋಪಿಯನ್ನು ಬಂಧಿಸಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಈ ಪರಿಶೀಲನೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.