ಪೊಲೀಸರಿಗೇ ಲಾಠಿಯಿಂದ ಹೊಡೆದ ಕಾರ್ಪೊರೇಟರ್ ರಕ್ಷಣೆ ಯತ್ನ!
ಮಂಗಳೂರು: ಕರ್ತವ್ಯ ನಿರತ ಇಬ್ಬರು ಪೊಲೀಸರ ಮೇಲೆ ಕಾರ್ಪೊರೇಟರ್ ಹಲ್ಲೆ ನಡೆಸಿ ವಾರ ಕಳೆದಿದೆ. ಆದರೆ ಆರೋಪಿಗಳನ್ನು ಇದುವರೆಗೂ ಬಂಧಿಸಲಾಗಿಲ್ಲ. ಆರೋಪಿ ಬೆಂಗ್ರೆ ಬಿಜೆಪಿ ಕಾರ್ಪೊರೇಟರ್ ರಘುವೀರ್ಗೆ ರಾಜಕೀಯ ಪ್ರಭಾವ ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬೆಂಬಲ ಇರುವುದೇ ಬಂಧನ ವಿಳಂಬಕ್ಕೆ ಕಾರಣ ಎನ್ನಲಾಗಿದೆ.
ಘಟನೆ ಹಿನ್ನೆಲೆ: ಕಾರ್ಪೋರೇಟರ್ ರಘುವೀರ್, ಗೆಳೆಯ ಯಶವಂತ್ ಮತ್ತು ಇತರ ಮೂವರು ಸೇರಿ ಇತ್ತೀಚೆಗೆ ಅಳಕೆ ಮೈದಾನದಲ್ಲಿ ಪೊಲೀಸರ ಲಾಠಿ ಕಿತ್ತುಕೊಂಡು ಅವರಿಗೇ ಹಲ್ಲೆ ನಡೆಸಿದ್ದರು.
ಹಲ್ಲೆ ನಡೆಸಿದ ತಕ್ಷಣ ಆರೋಪಿಗಳು ಬೆಳಗ್ಗಿನ ಜಾವ ಕೊಣಾಜೆ ಸಬ್ ಇನ್ಸ್ಪೆಕ್ಟರ್ ಸುಧಾಕರ್ ಬಳಿ ತೆರಳಿ ರಕ್ಷಿಸುವಂತೆ ಗೋಗರೆದಿದ್ದಾರೆ. ಸುಧಾಕರ್ ಅವರೆಲ್ಲರಿಗೂ ಬೈಯ್ದು ವಾಪಸ್ ಕಳುಹಿಸಿದ್ದಾರೆ. ಇದಾದ ಬಳಿಕ ಆರೋಪಿಗಳನ್ನು ಹಾಜರುಪಡಿಸುವುದಾಗಿ ಬಂದರ್ ಠಾಣೆ ಸಬ್ ಇನ್ ಸ್ಪೆಕ್ಟರ್ ಬಳಿ ಆರೋಪಿ ಪರ ವಕೀಲರು ಮಾತನಾಡಿದ್ದರು.
ಆದರೆ ಕೇಸ್ ಬಿಗಿಯಾಗುತ್ತಿರುವುದನ್ನು ಮನಗಂಡ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಮೇಲಧಿಕಾರಿಗಳು ಒತ್ತಡ ಹೇರಿಲ್ಲ ಮತ್ತು ರಾಜಕೀಯವೂ ಸೇರಿಕೊಂಡಿರುವುದರಿಂದ ಪೊಲೀಸರು ಪೂರ್ಣ ಪ್ರಮಾಣದ ತಾಖತ್ ಪ್ರದರ್ಶನ ಮಾಡಿಲ್ಲ. ಹೀಗಾಗಿ ಆರೋಪಿಗಳು ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಪೊಲೀಸರು ದೂರು ನೀಡಿದ ಬಳಿಕ ಎಫ್ಐಆರ್ ಆಗಿತ್ತು. ಆದರೂ ಪೊಲೀಸರ ಹೇಳಿಕೆಗಳನ್ನು ಮತ್ತೆ ಪಡೆಯಲಾಗಿದೆ. ಪೊಲೀಸರಿಗೆ ಹಲ್ಲೆ ನಡೆಸಿದ್ದು, ಬೆಂಗ್ರೆ ಕಾರ್ಪೊರೇಟರ್ ರಘುವೀರ್ ತಂಡ ಎಂದು ತಿಳಿದುಬಂದಿದೆ. ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಸೂಚಿಸಿದ್ದೇವೆ ಎಂದು ಡಿಸಿಪಿ (ಅಪರಾಧ) ಧರ್ಮಯ್ಯ ತಿಳಿಸಿದ್ದಾರೆ.