ಭೀಕರ ಅಪಘಾತ: ಕುಟುಂಬದ ನಾಲ್ವರ ಮೃತ್ಯು
ಪುತ್ತೂರು: ಕೆಎಸ್ಆರ್ಟಿಸಿ ಬಸ್ಸು ಮತ್ತು ಜೀಪ್ ಡಿಕ್ಕಿಯಾಗಿ ಪುರಸಭಾ ಸದಸ್ಯೆ ಲೀನಾ ಮಸ್ಕರೇನಸ್ ಸಹಿತ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಮಾಣಿ- ಮೈಸೂರು ರಾಜ್ಯ ಹೆದ್ದಾರಿಯ ಆರ್ಯಾಪು ಗ್ರಾಮದ ಸಂಟ್ಯಾರು ಸೇತುವೆ ಬಳಿ ಭಾನುವಾರ ಸಂಜೆ ನಡೆದಿದೆ.
ಪುತ್ತೂರಿನ ಬೈಪಾಸ್ ತೆಂಕಿಲ ನಿವಾಸಿಗಳಾದ ಪುತ್ತೂರು ಪುರಸಭಾ ಸದಸ್ಯೆ ಲೀನಾ ಮಸ್ಕರೇನಸ್ (46), ಅವರ ಪತಿ- ಪುತ್ತೂರು ಸಂತ ಫಿಲೋಮಿನಾ ಪ್ರೌಢಶಾಲೆ ಸಿಬ್ಬಂದಿ ಪೀಟರ್ ಮಸ್ಕರೇನಸ್ (50), ಪುತ್ರ ಮಾದೇ ದೇವುಸ್ ಶಾಲೆಯ ವಿದ್ಯಾರ್ಥಿ ಪ್ರಿತೇಶ್ ಮಸ್ಕರೇನಸ್ (13) ಮತ್ತು ಪೀಟರ್ ಅವರ ಸಹೋದರ ಅಂತೋನಿ ಮಸ್ಕರೇನಸ್ (42) ಮೃತರು.
ಪೀಟರ್ ಅವರ ಇನ್ನೋರ್ವ ಪುತ್ರ ಪ್ರೀತಂ ಮಸ್ಕರೇನಸ್ (17) ಮತ್ತು ಸಹೋದರ ಜೋಸೆಫ್ ಮಸ್ಕರೇನಸ್ ಎಂಬವರ ಪುತ್ರಿ ಜೋಸ್ಲಿನ್ ಮಸ್ಕರೇನಸ್ ಗಾಯಗೊಂಡಿದ್ದು, ಅವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೀಟರ್ ಮಸ್ಕರೇನಸ್ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ಮದುವೆ ಮುಗಿಸಿ ಮರಳುತ್ತಿದ್ದಾಗ ಘಟನೆ: ಒಳಮೊಗ್ರು ಗ್ರಾಮದ ಪರ್ಪುಂಜ ಸಭಾಂಗಣವೊಂದರಲ್ಲಿ ಭಾನುವಾರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪೀಟರ್ ಮಸ್ಕರೇನಸ್ ಕುಟುಂಬ ಅಲ್ಲಿಂದ ಪುತ್ತೂರಿಗೆ ಜೀಪ್ನಲ್ಲಿ ಹಿಂತಿರುಗುತ್ತಿದ್ದ ವೇಳೆ, ಪುತ್ತೂರಿನಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿಯಾಯಿತು. ಪೀಟರ್ ಜೀಪ್ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.
ಮೃತ ಲೀನಾ ಮಸ್ಕರೇನಸ್ ಅವರು ಪುತ್ತೂರು ಪುರಸಭೆ ಸದಸ್ಯರಾಗಿದ್ದು, ಕಳೆದ ಪುರಸಭಾ ಚುನಾವಣೆಯಲ್ಲಿ ಅವರು ಪರ್ಲಡ್ಕ ವಾರ್ಡ್ನಿಂದ ಎರಡನೇ ಬಾರಿಗೆ ಆಯ್ಕೆಯಾಗಿದ್ದರು.
ಅವರ ಪತಿ ಪೀಟರ್ ಮಸ್ಕರೇನಸ್ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಂತೋನಿ ಮಸ್ಕರೇನಸ್ ಅವಿವಾಹಿತರಾಗಿದ್ದು, ತೆಂಕಿಲದಲ್ಲಿ ಮರದ ಕೆಲಸ ಮಾಡುತ್ತಿದ್ದರು. ಮೃತ ಬಾಲಕ ಪ್ರೀತೇಶ್ ಪುತ್ತೂರಿನ ಮಾಯಿದೆ ದೇವುಸ್ ಶಾಲೆಯ ವಿದ್ಯಾರ್ಥಿ.
ಶೋಕ ಸಾಗರ: ಮೃತಪಟ್ಟ ನಾಲ್ವರ ಮೃತದೇಹವನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಈ ಸಂದರ್ಭ ಆಸ್ಪತ್ರೆ ಮುಂಭಾಗ ಮೃತರ ಕುಟುಂಬಸ್ಥರು, ಆಪ್ತರು, ರಾಜಕೀಯ ಮುಖಂಡರು ಆಗಮಿಸಿ ಮೃತರ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ನೀಡಿದರು. ಶೋಕಸಾಗರದಲ್ಲಿ ಮುಳುಗಿದ್ದ ಮೃತರ ಸಂಬಂಧಿಕರ ಮತ್ತು ಆಪ್ತರ ರೋದನ ಮನ ಕರಗುವಂತಿತ್ತು.
ಮುಖಂಡರ ಅಂತಿಮ ದರ್ಶನ: ಶಾಸಕಿ ಶುಕುಂತಳಾ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ, ತಾಲೂಕು ಜೆಡಿಎಸ್ ಅಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ, ಬಜರಂಗದಳ ವಿಭಾಗ ಸಹ ಸಂಚಾಲಕ ಮುರಲೀಕೃಷ್ಣ ಹಸಂತಡ್ಕ, ಪುರಸಭಾ ಸದಸ್ಯರಾದ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಶಕ್ತಿಸಿನ್ಹ, ಜೀವಂಧರ್ ಜೈನ್, ಮಹಮ್ಮದ್ ಆಲಿ, ರಾಮಣ್ಣ ಗೌಡ ಅಲಂಗ, ನವೀನ್ಚಂದ್ರ ನಾಯ್ಕ್, ನವೀನ್ ಭಂಡಾರಿ, ದೀಕ್ಷಾ ಪೈ, ಸೀಮಾ ಗಂಗಾಧರ್, ವಾಣಿ ಶ್ರೀಧರ್, ಅನ್ವರ್ ಖಾಸಿಂ ಸೇರಿದಂತೆ ಪುರಸಭಾ ಸದಸ್ಯರು, ಜನಪ್ರತಿನಿಧಿಗಳು ಹಾಗೂ ರಾಜಕೀಯ ನೇತಾರರು ಹಾಗೂ ನೂರಾರು ಮಂದಿ ಆಸ್ಪತ್ರೆಗೆ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು.
2 ಗಂಟೆ ವಾಹನ ಸಂಚಾರ ಸ್ಥಗಿತ: ಅಪಘಾತ ನಡೆದ ಬಳಿಕ ಸುಮಾರು 2 ಗಂಟೆ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಎಚ್. ಮೆಂಡೋನ್ಸಾ, ಸರ್ಕಲ್ ಇನ್ಸ್ಪೆಕ್ಟರ್ ಸುರೇಶ್ ಕುಮಾರ್, ನಗರ ಠಾಣಾಧಿಕಾರಿ ಸುದರ್ಶನ್, ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ರಕ್ಷತ್ ಆಗಮಿಸಿ ಪರಿಶೀಲನೆ ನಡೆಸಿದರು.
ಸಚಿವರ ಭೇಟಿ: ರಾಜ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ನೀಡಿದರು. ಘಟನೆಯ ಮಾಹಿತಿ ಪಡೆದುಕೊಂಡ ಅವರು, ರಾತ್ರಿ ವೇಳೆಯೇ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಬೆಳಗ್ಗಿನ ವೇಳೆಗೆ ಕುಟುಂಬಸ್ಥರಿಗೆ ಮೃತದೇಹಗಳನ್ನು ಒಪ್ಪಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.