ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಲೇರಿಯಾ: ಕಾರ್ಮಿಕರಿಗೆ ಸ್ಥಳದಲ್ಲೇ ಶುಶ್ರೂಷೆ!

Mainashree
Updated On : 3 Jun 2013, 10:24 am

ಮಂಗಳೂರು: ಮಳೆಗಾಲ ಶುರುವಾಗುತ್ತಿದ್ದಂತೆ ಮಲೇರಿಯಾ ರೋಗ ಹಾವಳಿ ದಾಂಗುಡಿ ಇಡುತ್ತ್ತಿದೆ. ಇದನ್ನು ಸಾಧ್ಯವಾದಷ್ಟು ಮಟ್ಟಹಾಕಲು ಮಂಗಳೂರು ಮಹಾನಗರ ಪಾಲಿಕೆ ಈಗಲೇ ಸಿದ್ಧತೆ ಆರಂಭಿಸಿದ್ದು, ಈ ಬಾರಿ ಎರಡು ಪ್ರತ್ಯೇಕ ಸಂಚಾರಿ ತಂಡವನ್ನು ರಚಿಸಿದೆ.
ಈ ತಂಡಗಳು ಪ್ರಮುಖ ನಿಲ್ದಾಣ ಹಾಗೂ ನಿರ್ಮಾಣ ಸ್ಥಳಗಳಲ್ಲಿ ಕಾರ್ಮಿಕರಿದ್ದಲ್ಲಿಗೇ ತೆರಳಿ ಕಾರ್ಮಿಕರ ತಪಾಸಣೆ ನಡೆಸಲಿದೆ, ಅವಶ್ಯವಾದರೆ ಶುಶ್ರೂಷೆ ನೀಡಲಿವೆ.
ಪ್ರತಿದಿನ ಸಂಚಾರ: ರಾಜ್ಯದಲ್ಲಿ ಮಲೇರಿಯಾ ಹರಡುವಿಕೆಯಲ್ಲಿ ಮಂಗಳೂರಿಗೆ ಪ್ರಥಮ ಸ್ಥಾನ. ಉಳಿದ ನಗರಗಳಲ್ಲಿ ಮಲೇರಿಯಾ ಬಾಧೆ ಅಷ್ಟಾಗಿ ಇಲ್ಲ. ಹಾಗಾಗಿ ಕಳೆದ ಎರಡು ವರ್ಷಗಳಿಂದ ಪಾಲಿಕೆ ಆರೋಗ್ಯ ವಿಭಾಗ ಹಾಗೂ ಮಲೇರಿಯಾ ಘಟಕ ಮಲೇರಿಯಾ ನಿರ್ಮೂಲನಕ್ಕೆ ಇನ್ನಿಲ್ಲದ ಕೆಲಸ ಮಾಡುತ್ತಿದೆ. ಇದರ ಪರಿಣಾಮ ಈ ಬಾರಿ ಏಪ್ರಿಲ್‌ನಲ್ಲಿ ಮಲೇರಿಯಾ ಪ್ರಕರಣ ಇಳಿಮುಖವಾಗಿದ್ದು, 310ಪ್ರಕರಣ ದಾಖಲಾಗಿದೆ. ಕಳೆದ ಬಾರಿ ಮಲೇರಿಯಾ ಸಂಖ್ಯೆ 700 ದಾಟಿತ್ತು.
ಈ ಸಲ ಎರಡು ತಂಡಗಳು ಪ್ರಮುಖ ಬಸ್ ನಿಲ್ದಾಣ, ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸಿ ಕಾರ್ಮಿಕರ ತಪಾಸಣೆ ನಡೆಸಲಿದೆ. ರಕ್ತಪರೀಕ್ಷೆಯಲ್ಲಿ ಮಲೇರಿಯಾ ಜ್ವರ ಖಚಿತವಾದರೆ ಸ್ಥಳದಲ್ಲೇ ಉಪಚರಿಸಲಿವೆ. ಇನ್ನೆರಡು ಸಂಚಾರಿ ತಂಡ ನಿರ್ಮಾಣ ಹಂತದ ಕಟ್ಟಡ ಇರುವಲ್ಲಿ ತೆರಳಿ ಅಲ್ಲಿಯೂ ತಪಾಸಣೆ, ಚಿಕಿತ್ಸೆ ನಡೆಸಲಿದೆ.
ವೈದ್ಯಕೀಯ ವಿದ್ಯಾರ್ಥಿಗಳ ಬಳಕೆ: ಮಲೇರಿಯಾ ತಪಾಸಣೆ ಮತ್ತು ಚಿಕಿತ್ಸೆಗೆ ನಗರದ ವೈದ್ಯಕೀಯ ಕಾಲೇಜು ಹಾಗೂ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಪಾಲಿಕೆ ತೀರ್ಮಾನಿಸಿದೆ.
ಸರದಿಯಂತೆ ಈ ವಿದ್ಯಾರ್ಥಿಗಳು ಕಾರ್ಯನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಪಾಲಿಕೆಯ 60 ವಾರ್ಡ್‌ಗಳನ್ನು 6 ವಲಯವಾಗಿ ವಿಂಗಡಿಸಲಾಗಿದೆ. 6 ವೈದ್ಯಕೀಯ ಕಾಲೇಜುಗಳಿಗೆ ಇದನ್ನು ಹಂಚಿಕೆ ಮಾಡಿದ್ದು, ಕಾಲೇಜುಗಳೇ ಉಸ್ತುವಾರಿ ನೋಡಿಕೊಳ್ಳಲಿವೆ. ಮಲೇರಿಯಾ ತಪಾಸಣೆ ಉಪಕರಣ ಹಾಗೂ ಔಷಧವನ್ನು ಪಾಲಿಕೆ ನೀಡಲಿದೆ. ಇದಲ್ಲದೆ ಮನೆ ಮನೆ, ಸಂಘ ಸಂಸ್ಥೆ ಭೇಟಿ, ಮಲೇರಿಯಾ ಬಗ್ಗೆ ತಿಳಿವಳಿಕೆ ಕಾರ್ಯಕ್ರಮವನ್ನೂ ವಿದ್ಯಾರ್ಥಿಗಳು ಹಮ್ಮಿಕೊಳ್ಳಲಿದ್ದಾರೆ. ಖಾಸಗಿ ಸಹಭಾಗಿತ್ವದಲ್ಲಿ ವರ್ಷಪೂರ್ತಿಕಾರ್ಯಕ್ರಮ ಜರಗುವಂತೆ ಪಾಲಿಕೆ ರೂಪುರೇಷೆ ತಯಾರಿಸಿದೆ.
ಡಿಸ್ಪೆನ್ಸರಿಗೆ ಕಾಯಕಲ್ಪ: ನಗರದ ಬಿಜೈ, ಲೇಡಿಹಿಲ್, ಪಾಲಿಕೆ ಕಟ್ಟಡ, ವೆನ್ಲಾಕ್ ಆಸ್ಪತ್ರೆ, ಸರ್ವೇಕ್ಷಣಾ ಕಚೇರಿ, ಜೆಪ್ಪು ಹಾಗೂ ಬೆಂಗ್ರೆಗಳಲ್ಲಿ ಡಿಸ್ಪೆನ್ಸರಿಗಳಿಗೆ ಪೂರ್ಣಕಾಲಿಕ ವೈದ್ಯರನ್ನು ನೇಮಿಸಿ ಕಾಯಕಲ್ಪ ನೀಡಲು ಪಾಲಿಕೆ ಉದ್ದೇಶಿಸಿದೆ.
ಉದಾಹರಣೆಗೆ ಬಿಜೈನಲ್ಲಿರುವ ಡಿಸ್ಪೆನ್ಸರಿಯನ್ನು ಮಲೇರಿಯಾ ಪರೀಕ್ಷಾ ಕೇಂದ್ರವಾಗಿ ಪರಿವರ್ತಿಸಲಾಗಿದ್ದು, ಅಲ್ಲಿ ಲ್ಯಾಬ್ ಟೆಕ್ನೀಶಿಯನ್ ಮಾತ್ರ ಇದ್ದಾರೆ. ಪಾಲಿಕೆಯಲ್ಲಿ ವೈದ್ಯರ ಹುದ್ದೆ ಖಾಲಿ ಇರುವುದರಿಂದ ನಗರದ 6 ಕಡೆಗಳಲ್ಲಿ ಲ್ಯಾಬ್ ಟೆಕ್ನಿಶಿಯನ್ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅವರೇ ರಕ್ತಪರೀಕ್ಷೆ ಮಾಡಿ ಮಲೇರಿಯಾಗೆ ಔಷಧ ನೀಡಬೇಕು. ಬಿಜೈ ಮಲೇರಿಯಾ ಪರೀಕ್ಷಾ ಕೇಂದ್ರ ಸುತ್ತ ಸೊಳ್ಳೆ ಉತ್ಪತ್ತಿ ತಾಣವಾಗಿದ್ದು, ಕಟ್ಟಡ ಸ್ವಚ್ಛತೆ ಇಲ್ಲದೆ ಶಿಥಿಲಾವಸ್ಥೆಯಲ್ಲಿದೆ.

ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement