ವೈದ್ಯ ಪದವಿ ಪಡೆದವರಿಗೆ ಸರ್ಕಾರಿ ಆಸ್ಪತ್ರೆ ಕೆಲಸ ಕಡ್ಡಾಯಗೊಳಿಸಲು ಚಿಂತನೆ: ಖಾದರ್
ಪುತ್ತೂರು: ಮುಂದಿನ ದಿನಗಳಲ್ಲಿ ವೈದ್ಯ ಪದವಿ ಪಡೆದವರು ಕನಿಷ್ಠ ಒಂದು ವರ್ಷ ಸರ್ಕಾರಿ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಕೆಲಸ ಮಾಡುವಂತೆ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿದ ಅವರು, ಅಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭ ಶಾಸಕಿ ಶಕುಂತಳಾ ಶೆಟ್ಟಿ ಆಸ್ಪತ್ರೆ ಬಗ್ಗೆ ಸಚಿವರಿಗೆ ಮಾಹಿತಿ ನೀಡಿ, ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದೆ ಹಾಗೂ ಡಯಾಲಿಸಿಸ್ ಸೆಂಟರ್ ಆಗಬೇಕಿದೆ ಎಂದು ತಿಳಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ವೈದ್ಯಕೀಯ ಪದವಿ ಪಡೆದವರು ಕನಿಷ್ಠ ಒಂದು ವರ್ಷ ಸರ್ಕಾರಿ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಕೆಲಸ ಮಾಡುವಂತೆ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ಮೂಲಕ ವೈದ್ಯರ ಕೊರತೆ ನೀಗಿಸಬಹುದು ಎಂದರು. ಆಸ್ಪತ್ರೆಗೆ ಸಿಬ್ಬಂದಿ ಮತ್ತು ಇತರ ಯಂತ್ರೋಪಕರಣಗಳ ಪೂರೈಕೆ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್, ಪುರಸಭಾ ಸದಸ್ಯ ಮಹಮ್ಮದ್ ಆಲಿಇದ್ದರು.