ಸುದ್ದಿ ಸಂಕ್ಷೇಪ
ಯುವತಿ ನಾಪತ್ತೆ
ಬೈಂದೂರು: ಸಂಬಂಧಿಕರ ಮನೆಗೆ ಹೋಗಿ ಬರುವುದಾಗಿ ತಿಳಿಸಿದ್ದ ಯುವತಿಯೊಬ್ಬಳು ಇದುವರೆಗೂ ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಇಲ್ಲಿನ ಕೆರ್ಗಾಲ್ ಗ್ರಾಮದ ಅನಿತಾ (18) ನಾಪತ್ತೆಯಾದವರು. ಈಕೆ ಬುಧವಾರ ಮಧ್ಯಾಹ್ನ ಕಾಲ್ತೋಡು ಗ್ರಾಮದಲ್ಲಿರುವ ಮಾವನ ಹೆಂಡತಿ ನಾಗು ಪೂಜಾರ್ತಿ ಎಂಬವರ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಅಲ್ಲಿಗೂ ಹೋಗದೆ, ವಾಪಸ್ ಮನೆಗೂ ಬಾರದೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಗಾರಿ: ಓರ್ವ ಸೆರೆ
ಕುಂದಾಪುರ: ಇಲ್ಲಿನ ಹೆಮ್ಮಾಡಿ ಬಸ್ ನಿಲ್ದಾಣ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಟ ನಿರತನಾಗಿದ್ದ ವ್ಯಕ್ತಿಯೊರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಆಟಕ್ಕೆ ಬಳಸಿದ ರು. 2500 ನಗದು ಹಾಗೂ ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ನಾಪತ್ತೆ
ಕೋಟ: ಇಲ್ಲಿನ ಮಣೂರು ಗ್ರಾಮದ ನಡುಬೆಟ್ಟು ಎಂಬಲ್ಲಿಂದ ವ್ಯಕ್ತಿಯೊಬ್ಬ ನಾಪತ್ತೆಯಾಗಿರುವ ಘಟನೆ ಮಾ.1ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾಣೆಯಾದವರು ಶೇಖರ ಪೂಜಾರಿ (35), ಅವರು ಮಾ.1ರಂದು ಬೆಂಗಳೂರಿಗೆ ಹೋಗಿದ್ದು, ಹೋಗುವಾಗ ಪತ್ನಿ ಬಳಿ ತಾನು ಬೆಂಗಳೂರಿಗೆ ಕೆಲಸಕ್ಕೆ ಸೇರಿದ ಬಳಿಕ ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಹೋಗಿದ್ದರು. ಆದರೆ ಈವರೆಗೂ ಹಿಂದಕ್ಕೂ ಬಂದಿಲ್ಲ, ಸಂಪರ್ಕದಲ್ಲಿಯೂ ಇಲ್ಲ ಎಂದು ಪತ್ನಿ ರೇಖಾ ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೋಟ್ನಲ್ಲಿ ವ್ಯಕ್ತಿ ಸಾವು
ಮಲ್ಪೆ: ಇಲ್ಲಿನ ಕೊಳದ ನಿವಾಸಿಯೊಬ್ಬರು ಬಂದರಿನಲ್ಲಿ ನಿಲ್ಲಿಸಲಾಗಿದ್ದ ಬೋಟಿನಲ್ಲಿ ಬಿದ್ದು ಮೃತಪಟ್ಟ ಘಟನೆ ಭಾನುವಾರ ಮುಂಜಾನೆ ನಡೆದಿದೆ. ಮೃತರು ಗೋಪಾಲ (65), ಮಲ್ಪೆಯ ಧಕ್ಕೆಯಲ್ಲಿ ಕಳೆದ ಹಲವು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದರು. ಅವರು ಮನೆಗೆ ಹೋಗದೆ ಧಕ್ಕೆಯಲ್ಲಿಯೇ ಬೋಟ್ನಲ್ಲಿ ಮಲಗುತ್ತಿದ್ದರು. ಭಾನುವಾರ ಬೆಳಗ್ಗೆ 9 ಗಂಟೆಗೆ ಶ್ರೀಧರ ಎಂಬವರು ಬೋಟ್ನಲ್ಲಿ ಸಂಗ್ರಹವಾಗಿರುವ ಮಳೆಯ ನೀರನ್ನು ತೆಗೆಯಲು ಬಂದಾಗ, ಗೋಪಾಲ ಅವರು ಮೃತಪಟ್ಟಿರುವುದು ಕಂಡುಬಂತು. ಅವರು ಬಹುಶಃ ಬೋಟ್ನಿಂದ ಬೋಟ್ಗೆ ಹಾರುವಾಗ ಬಿದ್ದು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದನ ಕಳವು
ಪಡುಬಿದ್ರಿ: ಇಲ್ಲಿನ ಪಲಿಮಾರು ಗ್ರಾಮದ ಮನೆಯೊಂದರ ಕೊಟ್ಟಿಗೆಯಿಂದ ಹಸುವನ್ನು ಕಳವು ಮಾಡಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಇಲ್ಲಿನ ಶ್ರೀನಿಧಿ ನಿಲಯದ ನಿವಾಸಿ ನಳಿನಾಕ್ಷಿ ಅವರು ಎಂದಿನಂತೆ ಶನಿವಾರ ರಾತ್ರಿ 1.30 ಗಂಟೆಗೆ ಹಸುಗಳಿಗೆ ಹುಲ್ಲು ಹಾಕಿ ಮಲಗಿದ್ದರು. ಭಾನುವಾರ ಬೆಳಗ್ಗೆ 6 ಗಂಟೆಗೆ ಹಾಲು ಕರೆಯಲು ಹೋದಾಗ ದನ ಹಾಗೂ ಕರು ಇಲ್ಲದಿರುವುದು ಪತ್ತೆಯಾಯಿತು. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಕಾಂಪೌಂಡ್ಗೆ ಲಾರಿ ಡಿಕ್ಕಿ
ಮೂಲ್ಕಿ: ಇಲ್ಲಿನ ಕಾರ್ನಾಡು ಬೈಪಾಸ್ನ ಅಪಘಾತ ವಲಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದು ಖಾಸಗಿ ಬಸ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿ ಮನೆಯ ಕಾಂಪೌಂಡ್ ಆವರಣಕ್ಕೆ ಡಿಕ್ಕಿ ಹೊಡೆದಿದ್ದು, ಸಂಪೂರ್ಣ ನಜ್ಜುಗುಜ್ಜಾಗಿದೆ. ಮಂಗಳೂರು ಕಡೆಯಿಂದ ಬರುತ್ತಿದ್ದ ಖಾಸಗಿ ಎಕ್ಸ್ಪ್ರೆಸ್ ಬಸ್ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆ ಮಾಡಿಕೊಂಡು ಬಂದು ಒವರ್ ಟೇಕ್ ಮಾಡುವ ಭರದಲ್ಲಿ ತೀರ ಬಲ ಬದಿಗೆ ಆಗಮಿಸಿತು. ಈ ಸಂದರ್ಭ ಎದರಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿಯು ಬಸ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ರಸ್ತೆಯ ತೀರ ಎಡಬದಿಗೆ ಚಲಿಸಿ ರಸ್ತೆ ಬದಿಯ ಮನೆಯ ಕಂಪೌಂಡ್ ಆವರಣಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ದೊಡ್ಡ ಅಪಘಾತವೊಂದು ತಪ್ಪಿದಂತಾಗಿದೆ.
ರಿಕ್ಷಾದಿಂದ ಬಿದ್ದು ಪ್ರಯಾಣಿಕ ಸಾವು
ಉಪ್ಪಿನಂಗಡಿ: ಚಲಿಸುತ್ತಿದ್ದ ಅಟೋ ರಿಕ್ಷಾದಿಂದ ಆಕಸ್ಮಿಕವಾಗಿ ಪ್ರಯಾಣಿಕರೊಬ್ಬರು ರಸ್ತೆಗೆ ಬಿದ್ದು, ಸಾವನ್ನಪ್ಪಿದ ಘಟನೆ ಭಾನುವಾರ ಇಳಂತಿಲ ಗ್ರಾಮದ ನೂಜಿಲೆ ಎಂಬಲ್ಲಿ ನಡೆದಿದೆ. ಇಳಂತಿಲ ಗ್ರಾಮದ ಪಾರೆಂಕಿ ನಿವಾಸಿ ಪೂವಪ್ಪ ಪೂಜಾರಿ (58) ಎಂಬವರು ಇಳಂತಿಲದಿಂದ ಉಪ್ಪಿನಂಗಡಿಗೆ ಬರುತ್ತಿದ್ದಾಗ ಹಠತ್ತಾನೆ ರಿಕ್ಷಾದಿಂದ ಕೆಳಕ್ಕೆ ರಸ್ತೆಗೆ ಬಿದ್ದರು. ಪರಿಣಾಮ ಗಂಭೀರ ಸ್ವರೂಪದ ಗಾಯಗೊಂಡ ಅವರನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಪುತ್ತೂರು ಸಂಚಾರಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.