ಆಲೆಟ್ಟಿ ಪ್ರೌಢಶಾಲೆ ಶಿಕ್ಷಕರ ಸಾಮೂಹಿಕ ಅಮಾನತು
ಸುಳ್ಯ: ಗುಂಪುಗಾರಿಕೆ, ವಿದ್ಯಾರ್ಥಿಗಳೆದುರೇ ಜಗಳ ಮತ್ತಿತರ ಆರೋಪದಲ್ಲಿ ತಾಲೂಕಿನ ಆಲೆಟ್ಟಿ ಸರ್ಕಾರಿ ಪ್ರೌಢಶಾಲೆಯ ಆರು ಜನ ಶಿಕ್ಷಕರು ಮತ್ತು ಓರ್ವ ದ್ವಿತೀಯ ದರ್ಜೆ ಸಹಾಯಕನನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಇದರೊಂದಿಗೆ ಶಾಲೆಯ ಎಲ್ಲಾ ಶಿಕ್ಷಕರು ಅಮಾನತುಗೊಂಡಂತಾಗಿದ್ದು, ಬೋಧನೆಗೆ ಶಿಕ್ಷಣ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡಿದೆ. ಸಾರ್ವಜನಿಕರ, ಪೋಷಕರ ದೂರಿನ ಮೇರೆಗೆ ತನಿಖೆ ನಡೆಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ ವರದಿ ಆಧಾರದಲ್ಲಿ ಅಮಾನತು ಪ್ರಕ್ರಿಯೆ ನಡೆದಿದೆ.
ಆರೋಪಿಗಳು: ಆಲೆಟ್ಟಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸಂಧ್ಯಾ .ಕೆ, ಸಹಶಿಕ್ಷಕರಾದ ಸುಬ್ರಹ್ಮಣ್ಯ .ವಿ, ಹರಿಪ್ರಸಾದ .ಕೆ, ಚಂದ್ರಮತಿ .ಕೆ, ದೈಹಿಕ ಶಿಕ್ಷಕ ಶಿವಕುಮಾರ .ಎನ್ ಹಾಗೂ ದ್ವಿತೀಯ ದರ್ಜೆ ಸಹಾಯಕ ಯೋಗೀಶ ಭರತ ಎಂಬವರನ್ನು ಅಮಾನತುಗೊಳಿಸಲಾಗಿದೆ.
ಊರವರು, ಪೋಷಕರ ದೂರು: ಶಿಕ್ಷಣದ ಗುಣಮಟ್ಟ ವೃದ್ಧಿಸುವ ಮನೋಭಾವ ಹಾಗೂ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಲು ಇರಬೇಕಾದ ಕನಿಷ್ಠ ಶಿಸ್ತಿನ ಗುಣ ನಡತೆಗಳು ಇಲ್ಲದೆ ಇರುವುದರಿಂದ ಶಾಲೆಯಲ್ಲಿ ಪರಸ್ಪರ ಗಲಾಟೆ ಹಾಗೂ ಶಿಕ್ಷಕರ ವೈಮನಸ್ಸಿನಿಂದ ಫಲಿತಾಂಶ ಕುಸಿಯಲು ಕಾರಣರಾಗಿದ್ದಾರೆ ಎಂದು ಊರವರು ಮತ್ತು ಪೋಷಕರು ಕೆಲವು ತಿಂಗಳ ಹಿಂದೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಶಿಕ್ಷಕರಿಗೆ ಎಚ್ಚರಿಕೆ ನೀಡಿದ್ದರೂ ಅವರು ತಿದ್ದಿಕೊಂಡಿರಲಿಲ್ಲ.
ಮಾ. 16ರಂದು ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಈ ಆರೋಪಗಳ ದೂರಿನ ಕುರಿತು ವಿಚಾರ ನಡೆಸಿ ವರದಿ ಸಲ್ಲಿಸುವಂತೆ ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿತ್ತು. ತನಿಖೆ ನಡೆಸಿದ ಶಿಕ್ಷಣಾಧಿಕಾರಿಗಳು ವಿವರವಾದ ವರದಿ ಡಿ.ಡಿ.ಪಿ.ಐ.ಗೆ ಸಲ್ಲಿಸಿದ್ದರು.
ಸೋಮವಾರ ಶಾಲೆಗೆ ಭೇಟಿ ನೀಡಿದ ಡಿ.ಡಿ.ಪಿ.ಐ ಮೋಸೆಸ್ ಜಯಶೇಖರ್ ಅಮಾನತು ಆದೇಶ ಹೊರಡಿಸಿದ್ದಾರೆ.
ಇಲಾಖೆಯ ಉಪಯೋಜನಾ ಸಮನ್ವಯಾಧಿಕಾರಿ ಶಿವಪ್ರಕಾಶ್, ಶಿಕ್ಷಣಾಧಿಕಾರಿ ಸದಾನಂದ ಪೂಂಜ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ, ಸಮನ್ವಯಾಧಿಕಾರಿ ಚಂದ್ರಶೇಖರ ಪೇರಾಲು ಇದ್ದರು.
ಆರೋಪಗಳ ಸುರಿಮಳೆ: ಶಾಲೆಯಲ್ಲಿ ಗುಂಪುಗಾರಿಕೆ ಮಾಡುವುದು, ವಿದ್ಯಾರ್ಥಿಗಳೆದುರೇ ಜಗಳ ಮಾಡುವುದು, ಶಾಲಾ ಹಣದ ದುರುಪಯೋಗ, ಶಾಲೆಗೆ ಬಂದ ನಂತರ ಮನಸ್ಸಿಗೆ ಬಂದಂತೆ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ಅನಗತ್ಯ ಕಾರಣಗಳಿಂದ ಚಲನವನಲನ ಪುಸ್ತಕದಲ್ಲಿ ನಮೂದಿಸಿ ಶಾಲೆ ಬಿಟ್ಟು ತೆರಳುವುದು, ಶಾಲಾ ಹಾಜರಾತಿ ಪುಸ್ತಕದಲ್ಲಿ ತಿದ್ದಿ ಸಹಿ ಮಾಡಿರುವುದು, ಶಾಲೆಗೆ ಹಾಜರಾಗದೆ ಶಾಲಾ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿರುವುದು, ಶಾಲಾ ಮಕ್ಕಳಿಂದ ಪ್ರಶ್ನೆ ಪತ್ರಿಕೆಗಾಗಿ, ಪ್ರತಿಭಾ ಪುರಸ್ಕಾರಕ್ಕಾಗಿ ಹಣ ಸಂಗ್ರಹಿಸಿರುವುದು, ನಿಯಮಾನುಸಾರ ಮಕ್ಕಳಿಗೆ ಪಾಠ ಬೋಧನೆ ಮಾಡದೆ ಇರುವುದು ಹಾಗೂ ಶಾಲಾ ಫಲಿತಾಂಶ ಕುಸಿಯಲು ಶಿಕ್ಷಕರು ಕಾರಣವಾಗಿರುವುದು ಸೇರಿದಂತೆ ಗಂಭೀರ ಆರೋಪಗಳು ಶಿಕ್ಷಕರ ಮೇಲಿದೆ.
ಅಮಾನತುಗೊಂಡ ನೌಕರರು ತಮ್ಮ ಅಮಾನತಿನ ಅವಧಿಯಲ್ಲಿ ನಿಯಮಾನುಸಾರ ಜೀವನಾಂಶ ಭತ್ಯೆ ಪಡೆಯಲು ಅರ್ಹರಿರುತ್ತಾರೆ.
ಆದರೆ, ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಅಮಾನತು ಆದೇಶದಲ್ಲಿ ಸೂಚಿಸಲಾಗಿದೆ.
ಪರ್ಯಾಯ ವ್ಯವಸ್ಥೆ: ಶಿಕ್ಷಕರ ಸಾಮೂಹಿಕ ಅಮಾನತಿನಿಂದ ಬಿಕ್ಕಟ್ಟು ಉದ್ಭವಿಸಿರುವ ಆಲೆಟ್ಟಿ ಶಾಲೆಯ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ ತಿಳಿಸಿದ್ದಾರೆ.
ಈಗಾಗಲೇ ಪ್ರಭಾರ ಮುಖ್ಯ ಶಿಕ್ಷಕರಾಗಿ ಡಾ. ಸುಂದರ ಕೇನಾಜೆ ಅವರನ್ನು ನಿಯೋಜನೆಗೊಳಿಸಲಾಗಿದ್ದು, 3 ಶಿಕ್ಷಕರನ್ನು ಇತರ ಶಾಲೆಗಳಿಂದ ನಿಯೋಜನೆಗೊಳಿಸಲಾಗಿದೆ. ಗೌರವ ಶಿಕ್ಷಕರನ್ನೂ ನೇಮಿಸಿ ವಿದ್ಯಾರ್ಥಿಗಳಿಗೆ ತೊಂದರೆಯುಂಟಾಗದಂತೆ ಮಾಡಲಾಗುವುದು ಎಂದು ಮಲ್ಲೇಸ್ವಾಮಿ ತಿಳಿಸಿದ್ದಾರೆ.