ಕಸ ವಿಲೇವಾರಿ ವ್ಯವಸ್ಥೆ ಹೈಟೆಕ್
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈಗ ಕಸವಿಲೇವಾರಿಗೆ ಹೈಟೆಕ್ ವ್ಯವಸ್ಥೆ ಮಾಡಲಾಗಿದೆ. ಸೋಮವಾರದಿಂದ ಈ ನೂತನ ವ್ಯವಸ್ಥೆ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳುತ್ತಿದೆ. ಬೀದಿ ಬದಿ ಕಸ, ಮನೆ ಮನೆ ಕಸ ಸಂಗ್ರಹದಿಂದ ತೊಡಗಿ ಡಂಪಿಂಗ್ ಯಾರ್ಡ್ ವರೆಗಿನ ಎಲ್ಲ ವಿದ್ಯಮಾನಗಳು ಜಿಪಿಎಸ್ ಮುಖೇನ ಆನ್ಲೈನ್ನಲ್ಲಿ ದಾಖಲಾಗುತ್ತಿದ್ದು, ಕಸವಿಲೇವಾರಿಯಲ್ಲಿ ಪಾರದರ್ಶಕ ಕಾಯ್ದುಕೊಳ್ಳಲು ಪಾಲಿಕೆ ಈ ಕ್ರಮ ಕೈಗೊಂಡಿದೆ.
ಕೋಲ್ಕತ್ತಾದ ಟೆಸೆಲೈಟ್ ಲಿಮಿಟೆಡ್ ಕಂಪನಿ ಕಸವಿಲೇವಾರಿ ಪ್ಯಾಕೇಜ್ ಟೆಂಡರ್ ಪಡೆದುಕೊಂಡಿದ್ದು, ವಾರ್ಷಿಕ ರು. 27 ಲಕ್ಷ ಪಾವತಿಯಾಗಲಿದೆ. ಒಟ್ಟು 8 ಪ್ಯಾಕೇಜ್ ವಿಂಗಡಿಸಲಾಗಿದ್ದು, 9ನೇ ಪ್ಯಾಕೇಜ್ ಕಂಟೈನರ್ ಸಾಗಾಟ. ಈಗ ಕಸ ಸಂಗ್ರಹದಿಂದ ವಿಲೇವಾರಿ ವರೆಗಿನ ಎಲ್ಲ ಆಗುಹೋಗುಗಳು ನೇರವಾಗಿ ಪಾಲಿಕೆ ಕಂಪ್ಯೂಟರ್ನಲ್ಲಿ ದಾಖಲಾಗುತ್ತಿದ್ದು, ಇದು ವ್ಯವಸ್ಥಿತ ಕಸವಿಲೇವಾರಿಗೆ ಸಾಧ್ಯವಾಗಲಿದೆ.
ಹೈಟೆಕ್ ಏನೆಲ್ಲ?: ಒಟ್ಟು 60 ವಾರ್ಡ್ಗಳಲ್ಲಿ ಕಸವಿಲೇವಾರಿಗೆ 30 ವಾಹನಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ವಾಹನಕ್ಕೂ ಜಿಪಿಎಸ್ ಅಳವಡಿಸಲಾಗಿದೆ. ಹಾಗಾಗಿ ಈ ವಾಹನಗಳು ಎಲ್ಲೇ ಹೋಗಲಿ ಸಂಚರಿಸುವ ಜಾಗ ಕುಳಿತಲ್ಲೇ ಪತ್ತೆಹಚ್ಚಲು ಸಾಧ್ಯ. 2 ವಾರ್ಡ್ಗೆ ಒಂದು ವಾಹನವನ್ನು ಒದಗಿಸಲಾಗಿದ್ದು, ಮುಂಜಾನೆಯಿಂದ ಮಧ್ಯಾಹ್ನದೊಳಗೆ ವಾಹನ ನಿಗದಿತ ಸ್ಥಳಕ್ಕೆ ತೆರಳಿ ಕಸವಿಲೇವಾರಿ ಮಾಡುತ್ತದೆ. ಇದಲ್ಲದೆ 763 ಮನೆಗಳಿಗೆ ಬಿನ್ ನೀಡಲಾಗಿದ್ದು, ಅಲ್ಲಿಂದಲೂ ಕಸ ಸಂಗ್ರಹಿಸಲಾಗುತ್ತದೆ. ಸಣ್ಣ ವಾಹನದಲ್ಲಿ ಸಂಗ್ರಹಿಸಿದ ಕಸವನ್ನು ಈ ವಾಹನಗಳಿಗೆ ತುಂಬಿಸುತ್ತಾರೆ.
ಫೋಟೋ ರವಾನೆ ಕಡ್ಡಾಯ: ವಾರ್ಡ್ಗಳಿಂದ ಕಸ ವಿಲೇವಾರಿಗೆ ಮುನ್ನ ಕಸತುಂಬಿರುವ ಬಗ್ಗೆ ಮೊಬೈಲ್ನಲ್ಲಿ ಫೋಟೋ ಕ್ಲಿಕ್ಕಿಸಬೇಕು. ಕಸ ವಿಲೇವಾರಿ ಬಳಿಕ ಮತ್ತೊಮ್ಮೆ ಫೋಟೋ ಕ್ಲಿಕ್ಕಿಸಿ ಎರಡೂ ಫೋಟೋವನ್ನು ಮೊಬೈಲ್ನಿಂದ ಪಾಲಿಕೆಯ ನಿಯಂತ್ರಣ ಕೊಠಡಿಗೆ ರವಾನಿಸಬೇಕು. ನಂತರ ಡಂಪಿಂಗ್ ಯಾರ್ಡ್ಗೆ ಸಂಚರಿಸುವ ಲಾರಿಯನ್ನು ಅಲ್ಲಿ ವೇಬ್ರಿಡ್ಜ್ನಲ್ಲಿ ತೂಕ ಮಾಡುತ್ತಾರೆ. ಸಂಗ್ರಹಗೊಂಡ ಕಸದ ತೂಕವೂ ಗೊತ್ತಾಗುತ್ತದೆ. ಲಾರಿಗೆ ಜಿಪಿಎಸ್ ಇರುವುದರಿಂದ ಅಡ್ಡ ವ್ಯವಹಾರಕ್ಕೆ ಸಾಧ್ಯವಾಗದು. ಇನ್ನು ಡಂಪಿಂಗ್ ಯಾರ್ಡ್ನಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದು, ಇಲ್ಲಿಯೂ ಪಾರದರ್ಶಕವಾಗಿ ಕಸವಿಲೇವಾರಿ ಚಟುವಟಿಕೆ ನಡೆಯಲಿದೆ.