ಸಂಟ್ಯಾರು ರಸ್ತೆ ಅಪಘಾತ: ಇಬ್ಬರ ಚೇತರಿಕೆ, ಮೃತರ ಅಂತ್ಯಕ್ರಿಯೆ
ಪುತ್ತೂರು: ಜಿಲ್ಲೆಯನ್ನು ತಲ್ಲಣಿಸಿದ ಸಂಟ್ಯಾರು ರಸ್ತೆ ಅಪಘಾತದಲ್ಲಿ ಮೃತರಾದ ಒಂದೇ ಕುಟುಂಬದ ನಾಲ್ವರ ಮೃತದೇಹಗಳನ್ನು ಸೋಮವಾರ ಸಂಜೆ ಪುತ್ತೂರಿನ ಏಳ್ಮುಡಿಯಲ್ಲಿರುವ ಕ್ರೈಸ್ತ ದಫನ ಭೂಮಿಯಲ್ಲಿ ದಫನ ಮಾಡಲಾಯಿತು. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರು ಇದೀಗ ಚೇತರಿಸಿಕೊಂಡಿದ್ದಾರೆ.
ಮಾಣಿ ಮೈಸೂರು ರಾಜ್ಯ ಹೆದ್ದಾರಿಯಲ್ಲಿನ ಆರ್ಯಾಪು ಗ್ರಾಮದ ಸಂಟ್ಯಾರು ಸೇತುವೆ ಬಳಿಯ ತಿರುವಿನಲ್ಲಿ ಕೆಎಸ್ಆರ್ಟಿಸಿ ಬಸ್ ಮತ್ತು ಜೀಪು ನಡುವೆ ಡಿಕ್ಕಿ ಸಂಭವಿಸಿ ಪುರಸಭಾ ಸದಸ್ಯೆ ಲೀನಾ ಮಸ್ಕರೇನಸ್ ಸಹಿತ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡಿದ್ದರು.
ಅಪಘಾತದಿಂದ ಪುತ್ತೂರಿನ ಬೈಪಾಸ್ ತೆಂಕಿಲ ನಿವಾಸಿಗಳಾದ ಪುತ್ತೂರು ಪುರಸಭಾ ಸದಸ್ಯೆ ಲೀನಾ ಮಸ್ಕರೇನ್ಹಸ್ (46), ಅವರ ಪತಿ ಪೀಟರ್ ಮಸ್ಕರೇನ್ಹಸ್ (50), ಪುತ್ರ ಪ್ರಿತೇಶ್ ಮಸ್ಕರೇನಸ್(13) ಮತ್ತು ಪೀಟರ್ ಮಸ್ಕರೇನ್ಹಸ್ ಅವರ ಸಹೋದರ ಅಂತೋನಿ ಮಸ್ಕರೇನ್ಹಸ್ (42) ಮೃತಪಟ್ಟಿದ್ದರು. ಪೀಟರ್ ಮಸ್ಕರೇನ್ಹಸ್ ಅವರ ಇನ್ನೋರ್ವ ಪುತ್ರ ಪ್ರೀತಂ ಮಸ್ಕರೇನ್ಹಸ್ (17) ಮತ್ತು ಪೀಟರ್ ಅವರ ಸಹೋದರ ಜೋಸೆಫ್ ಮಸ್ಕರೇನ್ಹಸ್ ಅವರ ಪುತ್ರಿ ಜೋಸ್ಲಿನ್ ಮಸ್ಕರೇನ್ಹಸ್ ಗಾಯಗೊಂಡಿದ್ದು, ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜೋಸ್ಲಿನ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿರುವ ಗಾಯಾಳುಗಳು ಚೇತರಿಸಿಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದ ಮೃತದೇಹಗಳನ್ನು ಸೋಮವಾರ ಬೆಳಗ್ಗೆ ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಬಿಟ್ಟುಕೊಟ್ಟರು. ಬಳಿಕ ತೆಂಕಿಲದ ಪೀಟರ್ ಅವರ ಮನೆಗೆ ಎಲ್ಲಾ ಮೃತದೇಹಗಳನ್ನು ಕೊಂಡೊಯ್ದು ಅಂತಿಮ ಕ್ರಿಯೆಯ ವಿಧಿವಿಧಾನಗಳನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಪೀಟರ್ ಅವರ ಮನೆಯ ಹೊರಭಾಗದಲ್ಲಿ ಮೃತದೇಹಗಳನ್ನಿರಿಸಿ ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿಕೊಡಲಾಯಿತು. ಬೆಳಗ್ಗಿನಿಂದ ಸಂಜೆಯ ತನಕ ಸಾವಿರಾರು ಮಂದಿ ಮೃತರ ಅಂತಿಮ ದರ್ಶನ ಪಡೆದರು.
ಸಂಜೆ ವೇಳೆಗೆ ಮನೆಯಲ್ಲಿ ಪುತ್ತೂರು ಮಾದೆ ದೇವುಸ್ ಚರ್ಚ್ನ ಧರ್ಮಗುರು ಜೆರಾಲ್ಡ್ ಡಿ' ಸೋಜ, ಧರ್ಮಗುರುಗಳಾದ ಪ್ರಕಾಶ್ ಮೊಂತೆರೋ, ವಿಜಯ ಲೋಬೋ, ವಿಶಾಲ್ ಮೋನಿಶ್ ಮತ್ತು ಜೆ.ಬಿ. ಕ್ರಾಸ್ತಾ ಅವರು ಅಂತಿಮ ಪ್ರಾರ್ಥನೆ ನೆರವೇರಿಸಿದರು. ಬಳಿಕ ಮೃತದೇಹಗಳನ್ನು ಮೆರವಣಿಗೆಯ ಮೂಲಕ ಏಳ್ಮುಡಿಯಲ್ಲಿರುವ ಕ್ರೈಸ್ತ ದಫನ ಭೂಮಿಗೆ ತರಲಾಯಿತು. ಈ ಸಂದರ್ಭದಲ್ಲಿ ಸಾವಿರಕ್ಕೂ ಅಧಿಕ ಮಂದಿ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದರು.
ಏಲ್ಮುಡಿಯಲ್ಲಿರುವ ಚಾಪೆಲ್ನಲ್ಲಿ ಎಲ್ಲಾ ಮೃತದೇಹಗಳಿಗೆ ಅಂತಿಮ ಪೂಜಾ ವಿಧಿವಿಧಾನ ನಡೆಸಲಾಯಿತು. ನಂತರ ಪೌಲ್ ಹಿರಾಲ್ಡ್ ಮಸ್ಕರೇನ್ಹಸ್ ಶ್ರದ್ಧಾಂಜಲಿ ಭಾಷಣ ಮಾಡಿದರು. ಬಳಿಕ ದಫನ ಕಾರ್ಯ ನಡೆಸಲಾಯಿತು. ಮೃತ ಪಿಟರ್ ಅವರು ಕಳೆದ ಹಲವಾರು ವರ್ಷಗಳಿಂದ ಪುತ್ತೂರಿನ ದರ್ಬೆಯಲ್ಲಿರುವ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಜವಾನರಾಗಿ ಕೆಲಸ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಮೃತರ ಗೌರವಾರ್ಥಶಾಲೆಗೆ ರಜೆ ಸಾರಲಾಗಿತ್ತು.