ಸುದ್ದಿ ಸಂಕ್ಷೇಪ
ಪುತ್ತೂರು ಸರ್ಕಾರಿ ಆಸ್ಪತ್ರೆ ಉಪಕರಣ ದುರಸ್ತಿ, ಸಿಬ್ಬಂದಿ ನೇಮಕಕ್ಕೆ ಮನವಿ
ಪುತ್ತೂರು: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನಾದುರಸ್ತಿಯಲ್ಲಿರುವ ಉಪಕರಣಗಳ ದುರಸ್ತಿ ಮತ್ತು ನೂತನ ಉಪಕರಣಗಳ ವ್ಯವಸ್ಥೆ ಹಾಗೂ ವೈದ್ಯಕೀಯ ಮತ್ತು ಇನ್ನಿತರ ಸಿಬ್ಬಂದಿ ನೇಮಕ ಮಾಡುವಂತೆ ಪುತ್ತೂರಿನ ರೈಲ್ವೇ ನಿಲ್ದಾಣ ನಿವಾಸಿ ವಿಲಿಯಂ ಪಿಂಟೋ ಎಂಬವರು ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಮತ್ತು ಶಾಸಕಿ ಶಕುಂತಳಾ ಶೆಟ್ಟಿ ಅವರಿಗೆ ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿರುವ ವಿಲಿಯಂ ಪಿಂಟೊ, ಪುತ್ತೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ದುಃಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಗೆ ಆಲ್ಟ್ರಾಸೌಂಡ್ ಸ್ಕ್ಯಾನರ್ 1998ರಲ್ಲಿ ಸರಬರಾಜಾಗಿದ್ದು, ಇದೀಗ ಸಂಪೂರ್ಣ ಕೆಟ್ಟುಹೋಗಿ ಜನರಿಗೆ ಉಪಯೋಗಕ್ಕೆ ಲಭ್ಯವಿಲ್ಲ. ಮಾತ್ರವಲ್ಲದೆ, ಆಸ್ಪತ್ರೆಯಲ್ಲಿರುವ ಇತರ ಉಪಕರಣಗಳೂ ನಾದುರಸ್ತಿಯಲ್ಲಿವೆ. ಆಸ್ಪತ್ರೆಯಲ್ಲಿ ನುರಿತ ವೈದ್ಯರ ಕೊರತೆ ಹಾಗೂ ಆವಶ್ಯಕ ಸಿಬ್ಬಂದಿ ನೇಮಕಾತಿಯೂ ನಡೆದಿಲ್ಲ. ಈ ಬಗ್ಗೆ ಸಚಿವರು ಮತ್ತು ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆಗಳ ಪರಿಹಾರ ಕ್ರಮ ಕೈಗೊಳ್ಳುವಂತೆ ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಪ್ರಕಾಶ್ ದೈವಜ್ಞಗೆ ಭಡ್ತಿ
ವಿಟ್ಲ: ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜಿನ ಹಿರಿಯ ವಾಣಿಜ್ಯಶಾಸ್ತ್ರ ಉಪನ್ಯಾಸಕ ಪ್ರಕಾಶ್ ವಿ. ದೈವಜ್ಞ ಪ್ರಾಂಶುಪಾಲರಾಗಿ ಭಡ್ತಿ ಹೊಂದಿ ಜೂ.1ರಂದು ಅಧಿಕಾರ ವಹಿಸಿಕೊಂಡಿರುತ್ತಾರೆ.