ಕಾರಾಗೃಹದಲ್ಲಿ ಆರೋಪಿ ಮೃತ
ಮಂಗಳೂರು: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯೊಬ್ಬ ಮಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿ ಕುಂಪಲ ಆಶ್ರಯ ಕಾಲನಿ ನಿವಾಸಿ ನವೀನ್ ಪೂಜಾರಿ(43). ಜೈಲಿನಲ್ಲಿ ತೀವ್ರ ಅಸ್ವಸ್ಥಗೊಂಡಿದ್ದ ಈತನನ್ನು ಜೂ.1ರಂದು ನಗರದ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಗುಣಮುಖಗೊಂಡಿದ್ದ ಈತ ಜೂ.2ರಂದು ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಿದ್ದ. ಆದರೆ ಮಂಗಳವಾರ ಏಕಾಏಕಿ ತೀವ್ರ ಅಸ್ವಸ್ಥಗೊಂಡ ಈತ ಮಧ್ಯಾಹ್ನ ಸಾವಿಗೀಡಾಗಿದ್ದು, ಹೃದಯಾಘಾತವಾಗಿರಬೇಕು ಎಂದು ಜೈಲಿನ ಅಧಿಕಾರಿಗಳು ಹೇಳುತ್ತಾರೆ.
ಅನುಮಾನಾಸ್ಪದವಾಗಿ ಸುಳಿದಾಡುತ್ತಿದ್ದ ಈತನನ್ನು ಉಳ್ಳಾಲ ಪೊಲೀಸರು ಮೇ 20ರಂದು ಮಧ್ಯರಾತ್ರಿ ಬಂಧಿಸಿದ್ದರು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಈತನ ಸಾವಿನ ಕುರಿತು ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.