ಶಾಲಾ ವಾಹನಕ್ಕೆ ಹಳದಿ ಬಣ್ಣ ವಿನಾಯ್ತಿ ನೀಡಿ
ಮಂಗಳೂರು: ಶಾಲಾ ವಾಹನವಾಗಿ ಸಂಚರಿಸುವ ಮ್ಯಾಕ್ಸಿಕ್ಯಾಬ್ಗಳಿಗೆ ಹಳದಿ ಬಣ್ಣ ಬಳಿಯುವುದರಿಂದ ವಿನಾಯ್ತಿ ನೀಡುವಂತೆ ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕ ಮಾಲಕರ ಸಂಘ ಜಿಲ್ಲಾ ಸಾರಿಗೆ ಪ್ರಾಧಿಕಾರವನ್ನು ಒತ್ತಾಯಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ದಿನೇಶ್ ಕುಂಪಲ, ಟೂರಿಸ್ಟ್ ಪರವಾನಗಿ ಹೊಂದಿರುವ ಕಾರು ಮತ್ತು ವ್ಯಾನ್, ಮ್ಯಾಕ್ಸಿಕ್ಯಾಬ್, ಮಿನಿ ಬಸ್, ಸಾಧಾರಣ 12 ಆಸನದ ಪರವಾನಗಿ ಹೊಂದಿರುವ ಮ್ಯಾಕ್ಸಿಕ್ಯಾಬ್ ವಾಹನಕ್ಕೆ ಹಳದಿ ಬಣ್ಣ ಬಳಿಯುವುದರಿಂದ ಟೂರಿಸ್ಟ್ ವಾಹನದಲ್ಲಿ ಬಾಡಿಗೆ ಮಾಡಲು ಅನಾನುಕೂಲವಾಗುತ್ತದೆ. ಇದರ ಪ್ರಯೋಜನವನ್ನು ಖಾಸಗಿ ವಾಹನಗಳು ಪಡೆಯುತ್ತವೆ. ಈ ವಾಹನಗಳಿಗೆ ಈಗಾಗಲೇ ಆದಾಯಕ್ಕಿಂತ ಹೆಚ್ಚಿನ ಖರ್ಚು ಬರುತ್ತಿದ್ದು, ದುಬಾರಿ ವಾಹನ ವಿಮೆ, ರಸ್ತೆ ತೆರಿಗೆ, ಇಂಧನ ವೆಚ್ಚ, ವಾಹನ ಬಿಡಿಭಾಗಗಳ ವಿಪರೀತ ಬೆಲೆ ಏರಿಕೆಯಿಂದ ಟೂರಿಸ್ಟ್ ವಾಹನ ಮಾಲಕರು ಕಂಗಾಲಾಗಿದ್ದಾರೆ. ಆದ್ದರಿಂದ ಟೂರಿಸ್ಟ್ ವಾಹನಗಳ ಮಾಲಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.