ಸುದ್ದಿ ಸಂಕ್ಷೇಪ
ಕುಂದಾಪುರದಲ್ಲಿ ಹೆಚ್ಚುವರಿ ನ್ಯಾಯಾಲಯ:ಸರ್ಕಾರ ಆದೇಶ ಎತ್ತಿಹಿಡಿದ ಹೈಕೋರ್ಟ್
ಬೆಂಗಳೂರು: ಕುಂದಾಪುರದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸ್ಥಾಪಿಸುವ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಕುಂದಾಪುರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಿದ ನಂತರ ಮಾತ್ರ ಅಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪಿಸಬೇಕು ಎಂದು ಆಕ್ಷೇಪಿಸಿ ಉಡುಪಿ ಜಿಲ್ಲಾ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾ.ಎಚ್.ಜಿ.ರಮೇಶ್ ಅವರಿದ್ದ ಏಕಸದಸ್ಯ ಪೀಠ, ಅಗತ್ಯವಿದ್ದಲ್ಲಿ ನ್ಯಾಯಾಲಯ ಸ್ಥಾಪಿಸಲು ಸರ್ಕಾರಕ್ಕೆ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದೆ. ಹೈಕೋರ್ಟ್ ಶಿಫಾರಸಿನ ಮೇರೆಗೆ ಕುಂದಾಪುರದಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪಿಸಲು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಜಿಲ್ಲಾ ನ್ಯಾಯಾಲಯ ಸ್ಥಾಪಿಸಲು ಅವಕಾಶವಿದೆ. ಆದ್ದರಿಂದ ಕುಂದಾಪುರದಲ್ಲಿ ನ್ಯಾಯಾಲಯ ಸ್ಥಾಪಿಸಿರುವುದು ಸೂಕ್ತ ಕ್ರಮವಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
ಕಾಂತಾವರ: 9ರಂದು ನುಡಿನಮನ ಸರಣಿ
ಕಾಂತಾವರ: ಇಲ್ಲಿನ ಕನ್ನಡ ಸಂಘದ ವತಿಯಿಂದ ಸಾಹಿತ್ಯ ಸಂಸ್ಕೃತಿ ಸಂವರ್ಧನ ನುಡಿನಮನ- 66 'ನಮ್ಮ ಕನ್ನಡ ನಮ್ಮದು' ತಿಂಗಳ ಸರಣಿ ಕಾರ್ಯಕ್ರಮ 9ರಂದು ಅಪರಾಹ್ನ 3ಕ್ಕೆ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡಭವನದ ಪಂಪ ಮಹಾಕವಿ ಸಭಾಭವನದಲ್ಲಿ ನಡೆಯಲಿದೆ. ಕನ್ನಡದ ಮಹತ್ವದ ಮತ್ತು ಮರೆಯಬಾರದ ಕಾದಂಬರಿಗಳ ವರ್ಷಪೂರ್ತಿ ಮರು ಓದು ಕಾರ್ಯಕ್ರಮದಲ್ಲಿ ಟಿ.ಎ.ಎನ್. ಖಂಡಿಗೆ ಅವರು ಎಂ.ಎಸ್. ಪುಟ್ಟಣ್ಣ ಅವರ ಕಾದಂಬರಿ 'ಮಾಡಿದ್ದುಣ್ಣೋ ಮಹಾರಾಯ' ಕುರಿತು ಮಾತನಾಡಲಿದ್ದಾರೆ.
ನೇಣು ಬಿಗಿದು ಆತ್ಮಹತ್ಯೆ
ಉಡುಪಿ: ಇಲ್ಲಿನ ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರದಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ವಿಶ್ವನಾಥ (32) ಮೃತರು. ಈತ ಇಲ್ಲಿನ ನಿವಾಸಿ ಅಂಗಾರ ಎಂಬವರ ಮಗ. ಈತ ಮನೆಯಲ್ಲಿ ಬೆಳಗ್ಗೆ 11ಕ್ಕೆ ಮನೆಯ ಮಾಡಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡಿದ್ದು, ಮನೆಯವರು ನೋಡಿ ತಕ್ಷಣ ಹಗ್ಗ ಬಿಡಿಸಿ ಮಣಿಪಾಲ ಆಸ್ಪತ್ರೆಗೆ ಸಾಗಿಸಿದರು. ಆದರೆ ವಿಶ್ವನಾಥ ಅದಾಗಲೇ ಮೃತಪಟ್ಟಿದ್ದರು. ವಿಶ್ವನಾಥ ಸುಮಾರು 6 ತಿಂಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಮಾಡಿಸಿದ್ದರೂ ಗುಣಮುಖರಾಗದೇ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತರ ಸಹೋದರ ರಘು ಪಿ. ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಆತ್ಮಹತ್ಯೆ
ಮಂಗಳೂರು: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕೋಡಿಕಲ್ ನಿವಾಸಿ ಪ್ರಭು(24)ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ವರದಿಯಾಗಿದೆ. ಬಟ್ಟೆ ವ್ಯಾಪಾರ ಹಾಗೂ ಫೈನಾನ್ಸ್ ವ್ಯವಹಾರದಲ್ಲಿ ನಷ್ಠ ಉಂಟಾಗಿತ್ತು. ಇದರಿಂದ ನೊಂದು ಈ ಕೃತ್ಯವೆಸಗಿದ್ದಾಗಿ ಸಹೋದರ ಉರ್ವಾ ಪೊಲೀಸರಿಗೆ ದೂರು ನೀಡಿದ್ದಾರೆ.
ಬಾಲಕ ನಾಪತ್ತೆ
ಮಂಗಳೂರು: ಮಂಜನಾಡಿ ನಿವಾಸಿ ಫಯಾಜ್(13) ಬಾಲಕ ನಾಪತ್ತೆಯಾದ ಘಟನೆ ಮಂಗಳವಾರ ವರದಿಯಾಗಿದೆ. ಮೇ27ರಂದು ಬೆಳಗ್ಗೆ ಮಕ್ಕಳ ಜತೆ ಆಟವಾಡಲು ತೆರಳಿದ ಈತ ಮರಳಿ ಬಂದಿಲ್ಲ ಎಂದು ಕೊಣಾಜೆ ಪೊಲೀಸರಿಗೆ ಈತನ ತಾಯಿ ನಝೀಮಾ ದೂರು ನೀಡಿದ್ದಾರೆ.
ಸರ ಸೆಳೆದು ಪರಾರಿ
ಮಂಗಳೂರು: ಉಳ್ಳಾಲದ ಜೆಸಿ ನಗರದಲ್ಲಿ ಪಾದಚಾರಿಯಾಗಿ ಸಾಗುತ್ತಿದ್ದ ವತ್ಸಲಾ ಎಂಬವರ ಕುತ್ತಿಗೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಸರ ಸೆಳೆದು ಪರಾರಿಯಾದ ಘಟನೆ ಮಂಗಳವಾರ ಸಂಭವಿಸಿದೆ. ಈ ಬಗ್ಗೆ ಉಳ್ಳಾಲ ಪೊಲೀಸರಿಗೆ ದೂರು ನೀಡಲಾಗಿದೆ.
ಬೊಲೆರೊ ಡಿಕ್ಕಿ: ವಿದ್ಯುತ್ ಕಂಬ ಧರಾಶಾಹಿ
ಸುಳ್ಯ: ಕನಕಮಜಲು ಸಮೀಪ ಬೊಲೆರೊ ವಾಹನ ಡಿಕ್ಕಿಯಾಗಿ ವಿದ್ಯುತ್ ಕಂಬ ತುಂಡಾದ ಘಟನೆ ನಡೆದಿದೆ. ಮಂಗಳೂರಿನಿಂದ ಮಂಡ್ಯಕ್ಕೆ ತೆರಳುತ್ತಿದ್ದ ಬೊಲೆರೋ ವಾಹನ ಕನಕಮಜಲು ಸಮೀಪದ ರಸ್ತೆಯಲ್ಲಿದ್ದ ಗುಂಡಿಗೆ ಬಿದ್ದ ಕಾರಣ ವಾಹನದ ಟಯರ್ ಪಂಕ್ಚರ್ ಆಯಿತು. ಇದರಿಂದ ವಾಹನವು ಚಾಲಕನ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ತೋಡಿಗೆ ಬಿತ್ತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.