'ಕೇಳು ಕಿಶೋರಿ' ಮಾದರಿಯಲ್ಲಿ 'ಕೇಳು ಕಿಶೋರ'
ಮಂಗಳೂರು: ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆ ಕೆಲವು ವರ್ಷಗಳಿಂದ ಹಮ್ಮಿಕೊಂಡಿರುವ 'ಕೇಳು ಕಿಶೋರಿ' ಆರೋಗ್ಯ ಅರಿವು ಕಾರ್ಯಕ್ರಮ ಮಾದರಿಯಲ್ಲಿ 'ಕೇಳು ಕಿಶೋರ' ಎಂಬ ವಿನೂತನ ಕಾರ್ಯಕ್ರಮವನ್ನು ಸರ್ವ ಶಿಕ್ಷಣ ಅಭಿಯಾನ ಇಲಾಖೆ ದ.ಕ.ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಹಮ್ಮಿಕೊಳ್ಳುತ್ತಿದೆ.
6 ರಿಂದ 8ನೇ ತರಗತಿ ವರೆಗಿನ ಬಾಲಕಿಯರಿಗೆ 'ಕೇಳು ಕಿಶೋರಿ' ಕಾರ್ಯಕ್ರಮ ನಡೆಸುತ್ತಿದ್ದು, ಇದರಲ್ಲಿ ಬಾಲಕರಿಯರಿಗೆ ಆರೋಗ್ಯ ಮಾಹಿತಿ ಜತೆಗೆ ಪ್ರೌಢಾವಸ್ಥೆಗೆ ಬಗ್ಗೆ ತಿಳುವಳಿಕೆ ಕೊಡುತ್ತಾರೆ. ಪ್ರತಿ ಶಾಲೆಗಳಲ್ಲಿ ವಿಷಯ ತಜ್ಞರು ವಾರದಲ್ಲಿ ಒಂದು ದಿನ ಆರೋಗ್ಯ ಬೋಧನೆ ಮಾಡುತ್ತಾರೆ. ಶಿಕ್ಷಣ ಇಲಾಖೆ ನಿರ್ದೇಶಿತ ವಿಷಯಗಳನ್ನು ಇಲ್ಲಿ ಕಲಿಸಲಾಗುತ್ತದೆ.
ಈಗ 'ಕೇಳು ಕಿಶೋರ': ಇದು ಸರ್ವ ಶಿಕ್ಷಣ ಇಲಾಖೆ ನಿರ್ದೇಶಿತ ಕಾರ್ಯಕ್ರಮವಲ್ಲವಾದರೂ, ಜಿಲ್ಲಾ ಸರ್ವ ಶಿಕ್ಷಣ ಇಲಾಖಾ ಸಂಯೋಜಕರ ಮುತ್ವರ್ಜಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನ ಮೇರೆಗೆ ಇದನ್ನು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಹಮ್ಮಿಕೊಳ್ಳಲಾಗಿದೆ. ಈ ಶೈಕ್ಷಣಿಕ ವರ್ಷ ಆಗಸ್ಟ್ನಿಂದ ಅಕ್ಟೋಬರ್ವರೆಗೆ 6ರಿಂದ 8ನೇ ತರಗತಿ ಬಾಲಕರಿಗೆ ಈ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ಶಾಲೆಯಲ್ಲೂ ತಜ್ಞ ಶಿಕ್ಷಕರು ಆರೋಗ್ಯ ಪಾಠ ಮಾಡಲಿದ್ದಾರೆ. ವಾರದಲ್ಲಿ ಒಂದು ದಿನ ಮಾತ್ರ ಈ ಶಿಕ್ಷಣ ನೀಡಲಿದ್ದು, ಬಾಲಕರಿಗೆ ಅರಿವು ಮೂಡಿಸುವುದು ಇದರ ಉದ್ದೇಶ. ಇಲ್ಲಿ ಬಾಲಕರಿಗೆ ಲೈಂಗಿಕ ಶಿಕ್ಷಣ ಇರುವುದಿಲ್ಲ.
ಪ್ರಸಕ್ತ ದಿನಗಳಲ್ಲಿ ಬಾಲಕರು ತಮಗೆ ಅರಿವಿಲ್ಲದೆಯೇ ಮಾದಕ ದ್ರವ್ಯ, ಧೂಮಪಾನ ದಾಸರಾಗುವುದು ಸಾಮಾನ್ಯ. ಎಳವೆಯಲ್ಲೇ ಇದರ ಬಗ್ಗೆ ತಿಳುವಳಿಕೆ ನೀಡದಿದ್ದರೆ ಬಾಲಕರ ಭವಿಷ್ಯ ನಾಶವಾಗುತ್ತದೆ. ಜಿಲ್ಲೆಯಲ್ಲಿ ಮಾದಕ ದ್ರವ್ಯ ಸೇವಿಸಿ ಪತ್ತೆಯಾದ 10ಕ್ಕೂ ಅಧಿಕ ಪ್ರಕರಣಗಳಲ್ಲಿ ಮಕ್ಕಳೂ ಇದ್ದು, ಅಂಥವರನ್ನು ನಗರದಲ್ಲಿರುವ ಚಿಣ್ಣರ ತಂಗುಧಾಮಕ್ಕೆ ಸೇರಿಸಲಾಗಿದೆ.
ಹಾನಿಕಾರಕ ಪೇಯ, ಜಂಕ್ಫುಡ್, ಬೀದಿಬದಿಯಲ್ಲಿ ತೆರೆದ ತಿಂಡಿ ತಿನಿಸು ಸೇವನೆ, ಮಾದಕದ್ರವ್ಯ ಬಗ್ಗೆ ಜಾಗೃತಿ, ಗುಟ್ಕಾ, ಧೂಮಪಾನ ನಿಷೇಧ ಕುರಿತು ಶಿಕ್ಷಕರು ಮಕ್ಕಳಿಗೆ ಸೂಕ್ತ ತಿಳುವಳಿಕೆ ನೀಡಲಿದ್ದಾರೆ. ಅಲ್ಲದೆ ಮಕ್ಕಳ ವರ್ತನೆ, ಆರೋಗ್ಯಕ್ಕಾಗಿ ಶುಚಿತ್ವ, ಬಾಲಕಿಯರ ಜತೆ ವರ್ತನೆ, ಉತ್ತಮ ಮತ್ತು ಆದರ್ಶ ವಿದ್ಯಾರ್ಥಿಯಾಗುವ ಕಲ್ಪನೆಯೊಂದಿಗೆ ಮಾಹಿತಿ ಕೊಡುತ್ತಾರೆ. ಪ್ರತಿ ಕ್ಲಸ್ಟರ್ ಮಟ್ಟದಲ್ಲಿ ಶಿಕ್ಷಕರಿಗೆ ಈ ಬಗ್ಗೆ ತಿಳಿಸಲಾಗಿದ್ದು, 3 ತಿಂಗಳಲ್ಲಿ ಪ್ರಾಯೋಗಿಕವಾಗಿ ಶಿಕ್ಷಣ ನೀಡಲಿದ್ದಾರೆ. ಇದಕ್ಕೆ ಇಲಾಖೆಯಿಂದ ಪ್ರತ್ಯೇಕ ಅನುದಾನವಿಲ್ಲ. 'ಕೇಳು ಕಿಶೋರಿ' ಪಾಠ ಮಾಡುವ ಶಿಕ್ಷಕರೇ 'ಕೇಳು ಕಿಶೋರ'ಕ್ಕೂ ಹೇಳಿಕೊಡಬಹುದು ಎನ್ನುತ್ತಾರೆ ಸರ್ವ ಶಿಕ್ಷಣ ಅಭಿಯಾನ ಜಿಲ್ಲಾ ಸಹಸಂಯೋಜಕ ಶಿವಪ್ರಕಾಶ್.
ಹಿಂದಿಯಲ್ಲೂ ಧ್ಯೇಯ ಗೀತೆ!
ಕಳೆದ ವರ್ಷ ಸರ್ವ ಶಿಕ್ಷಣ ಅಭಿಯಾನ ಜಿಲ್ಲಾ ಇಲಾಖೆ ಕನ್ನಡದಲ್ಲಿ ಮೊದಲ ಬಾರಿಗೆ ಅಭಿಯಾನದ ಧ್ಯೇಯೋದ್ದೇಶ ಸಾರುವ ಗೀತೆ ಸಂಕಲನ ಮಾಡಲಾಗಿತ್ತು. ಈ ಧ್ಯೇಯ ಗೀತೆಯನ್ನು ರಾಜ್ಯ ಸರ್ವ ಶಿಕ್ಷಣ ಅಭಿಯಾನ ಇಲಾಖೆ ಪ್ರಶಂಶಿಸಿತ್ತಲ್ಲದೆ, ರಾಜ್ಯದ ಎಲ್ಲ ಸರ್ವ ಶಿಕ್ಷಣ ಇಲಾಖೆ ಕಚೇರಿಗಳಿಗೆ ಮಾದರಿ ಗೀತೆ ಬಗ್ಗೆ ಮಾಹಿತಿ ನೀಡಿತ್ತು. ಇಲಾಖಾ ಕಾರ್ಯಕ್ರಮಗಳಲ್ಲಿ ಇದನ್ನು ಬಳಸಿಕೊಳ್ಳುವ ಕುರಿತು ಜಿಲ್ಲಾ ಪಂಚಾಯ್ತಿ ಕೂಡ ಸರ್ಕಾರಕ್ಕೆ ಪತ್ರ ಬರೆದಿತ್ತು. ಇದೇ ವೇಳೆಗೆ ಇದರ ಹಿಂದಿ ಅವತರಣಿಕೆಯನ್ನು ಸಹ ಸಂಯೋಜಕ ಶಿವಪ್ರಕಾಶ್ ನೇತೃತ್ವದಲ್ಲಿ ಹೊರತರಲಾಗಿದೆ. ಇದನ್ನು ಕೂಡ ಇಲಾಖೆ ಮೆಚ್ಚಿಕೊಂಡಿದ್ದು, ರಾಜ್ಯವ್ಯಾಪಿ ತರಬೇತಿ ಕಾರ್ಯಕ್ರಮಗಳಲ್ಲಿ ಈ ಗೀತೆ ಬಳಸುವ ಕುರಿತಂತೆ ಅನುಮತಿ ಕೋರಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಚರ್ಚೆ ನಡೆಸಲಾಗುವುದು ಎಂದು ಇಲಾಖೆ ಕಾರ್ಯಕ್ರಮ ಅಧಿಕಾರಿ ಶಿವಶಂಕರ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಆತ್ಮಭೂಷಣ್