ತೆರೆ ಮರೆಗೆ 'ತುಳು ರಂಗಭೂಮಿದ ಮಲ್ಲಣ್ಣೆ'
ಕಲೆಯನ್ನೇ ತನ್ನ ಬದುಕಾಗಿಸಿಕೊಂಡು ಹಲವಾರು ಕಲಾವಿದರನ್ನು ಸೃಷ್ಟಿಸಿ, ಕಲೆಯ ಮೂಲಕವೇ ಬದುಕು ಕಟ್ಟಿಕೊಳ್ಳುವಂತಾ ಅವಕಾಶಗಳನ್ನು ತೆರೆದಿಟ್ಟ 'ತುಳುರಂಗಭೂಮಿದ ಮಲ್ಲಣ್ಣೆ' ಎಂಬ ಬಿರುದಿಗೆ ಪಾತ್ರರಾದ ಶಾಂತಾರಾಂ ಕಲ್ಲಡ್ಕ ಶಾಶ್ವತವಾಗಿ ತೆರೆಯ ಮರೆಗೆ ಸರಿದಿದ್ದಾರೆ.
ಕಲ್ಲಡ್ಕ ಶ್ರೀನಿವಾಸ ಆಚಾರ್ಯ ಹಾಗೂ ಯುಮುನಾ ದಂಪತಿಯ ದ್ವಿತೀಯ ಪುತ್ರನಾಗಿ 1950ರಲ್ಲಿ ಜನಿಸಿದ ಶಾಂತಣ್ಣ ತನ್ನ 13ನೇ ವಯಸ್ಸಿನಿಂದ ಶಿಕ್ಷಕ ಬಿ. ಕೃಷ್ಣ ಹೊಳ್ಳರಿಂದ ಗಣಪತಿ, ಶಾರದೆ ಮೊದಲಾದ ವಿಗ್ರಹ ರಚನೆ ಕಲಿಯುವ ಮೂಲಕ ಕಲಾ ಬದುಕಿಗೆ ಕಾಲಿರಿಸಿದರು. ತಂದೆ ಮತ್ತು ತುಂಬೆಯ ರಂಗಕಲಾವಿದ ಜಿ.ಎಸ್. ಕೋಟ್ಯಾನ್ ಇವರ ನಾಟಕ ಕಲೆಗೆ ಪ್ರೇರಣೆಯಾದರೆ, ಚಿಕ್ಕಪ್ಪ ಧನಂಜಯ ಆಚಾರ್ಯರಲ್ಲಿ ಮುಖವಾಡ ಹಾಗೂ ಬೇತಾಳ ರಚನೆ ಕಲಿತರು.
ಪ್ರೌಢಶಿಕ್ಷಣದ ಬಳಿಕ ಬದುಕಿಗೆ ಕಲೆಯನ್ನೇ ನೆಚ್ಚಿಕೊಂಡ ಇವರು ರಂಗಭೂಮಿಯ ಸರ್ವ ವಿಭಾಗಗಳಲ್ಲೂ ಪರಿಣತರಾದರು. ನಾಟಕ ರಚನೆ, ಗೀತ ರಚನೆ, ನಿರ್ದೇಶನ, ಸಂಗೀತ, ಗಾಯನ, ಪರದೆ ನಿರ್ಮಾಣ, ರಂಗವಿನ್ಯಾಸ, ಪ್ರಸಾಧನ, ಬೆಳಕು ಜೊತೆಗೆ ನಟನೆ ಹೀಗೆ ಎಲ್ಲಾ ಮಜಲುಗಳಲ್ಲೂ ತೊಡಗಿಸಿಕೊಂಡು ತಮ್ಮದೇ ಛಾಪು ಮೂಡಿಸಿ ಇತರ ಕಲಾವಿದರಿಗೆ ಮಾದರಿಯಾಗಿದ್ದಾರೆ.
ಚಿಕ್ಕ ವಯಸ್ಸಿನಿಂದಲೇ ನಾಟಕ ರಂಗದ ವಿವಿಧ ಮಜಲುಗಳನ್ನು ಕರಗತ ಮಾಡಿಕೊಂಡ ಇವರು, ಸಹಸ್ರ ಸಹಸ್ರ ಕಲಾವಿದರನ್ನು ರಂಗಕ್ಕೆ ತಂದವರು. ಕಳೆದ ಹದಿನೈದು ದಶಕಗಳ ಹಿಂದೆ ಯಾವುದೇ ಹಳ್ಳಿಯ ಮೂಲೆಯಲ್ಲಿ ನೋಡಿದರೂ ಶಾಂತಣ್ಣನ ನಾಟಕಗಳೇ ಪ್ರದರ್ಶನವಾಗುತ್ತಿತ್ತು. ತುಳುರಂಗಭೂಮಿಯಲ್ಲಿ ಹೊಸಕ್ರಾಂತಿ ನಡೆಸುವ ಮೂಲಕ ತುಳು ರಂಗಭೂಮಿಗೆ ಹೊಸ ಆಯಾಮ ತಂದುಕೊಟ್ಟ ಅವರು, ಹವ್ಯಾಸಿ ಕಲಾವಿದರನ್ನು ರೂಪಿಸುವಲ್ಲಿ ಪಟ್ಟ ಶ್ರಮವನ್ನು ಇಡೀ ತುಳುರಂಗಭೂಮಿ ಸ್ಮರಿಸುತ್ತದೆ.
ಇಂದಿನ ತುಳು ರಂಗಭೂಮಿಯ ಹೆಚ್ಚಿನ ಮೇರು ಕಲಾವಿದರು ಶಾಂತಣ್ಣನ ರಂಗಶಿಕ್ಷಣದ ಮಾರ್ಗದರ್ಶನ ಪಡೆದವರು. ಆದುದರಿಂದ ಎಲ್ಲರಿಗೂ ಅವರೆಂದರೆ ಅಭಿಮಾನ, ಗೌರವ. ಕಲಾಸಿಂಹ, ಕಲಾವಲ್ಲಭ, ವಿಶ್ವೇಶ್ವರಯ್ಯ, ನಾಟಕ ಅಕಾಡೆಮಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಲ್ಲದೇ ಜಿಲ್ಲೆ, ಹೊರಜಿಲ್ಲೆಗಳ ನೂರಾರು ಸಂಘ ಸಂಸ್ಥೆಗಳಿಂದ ಸಮ್ಮಾನಿತರಾಗಿದ್ದಾರೆ .ಕಳೆದ 36 ವರ್ಷಗಳಿಂದ ತುಳು ಅಪ್ಪೆ ಜೋಕ್ಲು ಕಲಾಬಳಗ ಸ್ಥಾಪಿಸಿ ನಿರಂತರ ರಂಗ ಪ್ರದರ್ಶನ ನೀಡುತ್ತಿರುವ ಖ್ಯಾತಿ, ತನ್ನದೇ ನೇತೃತ್ವದ ನವ್ಯ ಮ್ಯೂಸಿಕಲ್ಸ್ ಬಳಗ, ತುಳು, ಕನ್ನಡ ಸಾಮಾಜಿಕ, ಚಾರಿತ್ರಿಕ, ಪೌರಾಣಿಕ ಹಾಗೂ ರೇಡಿಯೋ ನಾಟಕ ಹೀಗೆ ತನ್ನ ರಂಗ ಕಾಯಕದ ಬದುಕಿನಲ್ಲಿ ಸುಮಾರು 70 ನಾಟಕಗಳನ್ನು ರಚಿಸಿರುವ ಹಿರಿಮೆ ಇವರದ್ದು.
ಕುಂಕುಮ, ದಾರೆದ ಸೀರೆ, ಪರ್ಬ, ಸತ್ಯತೆರಿನಗ, ಕಣ್ತೋಜಿನ ದೇವೆರ್, ಅಪ್ಪೆ ಕಾಪುವಲ್, ದೇವೆರ್ ಕೈ ಬುಡಯೆರ್, ಬೇಡರ ಕಣ್ಣಪ್ಪ, ಲಂಡನ್ದ ಮಂಡೆ, ಲೈನ್ ತಾಗ್ಂಡಾ ಮೊದಲಾದವು ಪ್ರಸಿದ್ಧಿ ನಾಟಕಗಳು. ಕನ್ನಡ ಹಾಗೂ ತುಳು ಚಲನಚಿತ್ರದಲ್ಲೂ ಅಭಿನಯಿಸಿದ್ದಾರೆ.
ಮೌನೇಶ ವಿಶ್ವಕರ್ಮ