ಬದಿಯಡ್ಕ: 8ರಂದು ಕಯ್ಯಾರ ಕಿಂಞಣ್ಣ ರೈ ಅಭಿನಂದನೆ
ಮಂಗಳೂರು: ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈ ಅವರ 99ನೇ ಜನ್ಮದಿನೋತ್ಸವ ಪ್ರಯುಕ್ತ ಜೂ. 8ರಂದು ಬೆಳಗ್ಗೆ 10ಕ್ಕೆ ಕಾಸರಗೋಡಿನ ಬದಿಯಡ್ಕ ಪೆರಡಾಲ 'ಕವಿತಾ ಕುಟೀರ'ದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ.
ಕಾರ್ಯಕ್ರಮವನ್ನು ಕನ್ನಡ ಚಳುವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಉದ್ಘಾಟಿಸುವರು. ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಆರೋಗ್ಯ ಸಚಿವ ಯು.ಟಿ. ಖಾದರ್, ಅರಣ್ಯ ಸಚಿವ ಬಿ. ರಮಾನಾಥ್ ರೈ ಪಾಲ್ಗೊಳ್ಳುವರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಮಧುಕರ ರೈ ಕೊರೆಕ್ಕಾನ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. 2014ರಲ್ಲಿ ಕಿಂಞಣ್ಣ ರೈ ಅವರ ಶತಮಾನೋತ್ಸವ ಪ್ರಯುಕ್ತ ಸಮಿತಿ ಆಶ್ರಯದಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಈ ಸಂದರ್ಭ ದೇಶದ ಬೇರೆ ರಾಜ್ಯದಲ್ಲಿರುವ ವಿವಿ ಕನ್ನಡ ವಿಭಾಗ, ಶಾಲಾ ಕಾಲೇಜುಗಳಲ್ಲಿ ಕಯ್ಯಾರ ಕಿಂಞಣ್ಣ ರೈ ಜನ್ಮಶತಮಾನೋತ್ಸವ ಸಾಹಿತ್ಯೋತ್ಸವ ಸರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.