ವಿಚಾರಣೆಗೆ ಹಾಜರಾಗದ ಶ್ರೀಕಲಾ
ಕನ್ನಡಪ್ರಭ ವಾರ್ತೆ , ಮಂಗಳೂರು , ಜೂ. 5
ಎಸಿಪಿ ಟಿ.ಆರ್. ಜಗನ್ನಾಥ್ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ ಎಎಸ್‌ಐ ಶ್ರೀಕಲಾ ತನಿಖಾ ವಿಚಾರಣೆಗೆ ಬುಧವಾರ ಎರಡನೇ ಬಾರಿಯೂ ಹಾಜರಾಗಿಲ್ಲ. ಈ ಮಧ್ಯೆ 10 ದಿನ ರಜೆಯ ಬಳಿಕ ಟಿ.ಆರ್. ಜಗನ್ನಾಥ್ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಎಸಿಪಿ ವಿರುದ್ಧ ದೂರು ನೀಡಿರುವ ಎಎಸ್‌ಐ ಶ್ರೀಕಲಾರ ಅಧಿಕೃತ ರಜೆಯ ಅವಧಿ ಮುಗಿದಿದೆ. ಬಳಿಕ ಅನಾರೋಗ್ಯ ಕಾರಣ ನೀಡಿ ರಜೆ ಮುಂದುವರಿಸಿದ್ದಾರೆ. ಅವರು ರಜಾ ಚೀಟಿಯಲ್ಲಿ ನೀಡಿದ ವಿಳಾಸದಲ್ಲಿಯೂ ಇಲ್ಲ. ಎಲ್ಲಿದ್ದಾರೆ ಎಂಬುದೂ ಗೊತ್ತಿಲ್ಲ.
ಶ್ರೀಕಲಾ ಗೈರು ಹಿನ್ನೆಲೆಯಲ್ಲಿ ವಿಚಾರಣೆಯನ್ನು ಜೂ.13ಕ್ಕೆ ಮುಂದೂಡಲಾಗಿದೆ ಎಂದು ಲೈಂಗಿಕ ದೂರು ವಿಚಾರಣೆ ಸಮಿತಿ ನೇತೃತ್ವ ವಹಿಸಿರುವ ಪಾಂಡೇಶ್ವರ ಠಾಣಾ ಎಸಿಪಿ ಕವಿತಾ ತಿಳಿಸಿದ್ದಾರೆ. ಲೈಂಗಿಕ ಕಿರುಕುಳ ಆರೋಪದಲ್ಲಿ ವಿಚಾರಣೆ ಎದುರಿಸಬೇಕಾಗಿರುವ ದಕ್ಷಿಣ ಉಪವಿಭಾಗ ಎಸಿಪಿ ಟಿ.ಆರ್.ಜಗನ್ನಾಥ್ ಅವರನ್ನು ನಗರ ಪೊಲೀಸ್ ಕಮಿಷನರ್ ಮನೀಷ್ ಕರ್ಭೀಕರ್ 10 ದಿನ ರಜೆ ಮೇಲೆ ಕಳುಹಿಸಿದ್ದರು.