ಹಿರಿಯ ರಂಗಕರ್ಮಿ ಶಾಂತರಾಮ ಕಲ್ಲಡ್ಕ ನಿಧನ
ಮೂಲ್ಕಿ/ಬಂಟ್ವಾಳ: ತುಳು ರಂಗಭೂಮಿಯ ಹಿರಿಯ ಕಲಾವಿದ, ರಂಗ ನಟ, ನಿದೇರ್ಶಕ, ನಾಟಕ ರಚನೆಕಾರ ಶಾಂತರಾಮ ಕಲ್ಲಡ್ಕ (65) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮುಖವಾಡ ತಯಾರಿ, ವಿಗ್ರಹ ರಚನೆ, ಚಿತ್ರಕಲೆ, ಪ್ರಸಾಧನ, ಪರದೆ ಹಿನ್ನೆಲೆ, ರಂಗ ಸಜ್ಜಿಕೆ ಸೇರಿದಂತೆ ನಾಟಕ ರಂಗದ ಎಲ್ಲ ವಿಭಾಗದಲ್ಲಿ ಅವರು ಪರಿಣತಿ ಹೊಂದಿದ್ದರು. ಅವರ ರಂಗ ಸಾಧನೆಗಾಗಿ ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ತುಳು ಅಪ್ಪೆ ಜೋಕುಲು ಕಲಾ ಸಂಘಟನೆ ಆರಂಭಿಸಿ ಅದರ ಮೂಲಕ ದಾರೆದ ಸೀರೆ, ಪೊಣ್ಣ ಕಣ್ಣೀರು, ಕುಂಕುಮ ಸೇರಿದಂತೆ ಹಲವಾರು ನಾಟಕಗಳನ್ನು ರಚಿಸಿ, ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ. ಅವರ ಸಹೋದರ ರಮೇಶ್ ಅವರು ಕಲ್ಲಡ್ಕ ಬೊಂಬೆ ಬಳಗದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅವರು ಪತ್ನಿ ಜಯಂತಿ ಮತ್ತು ನಾಲ್ಕು ಮಕ್ಕಳನ್ನು ಅಗಲಿದ್ದಾರೆ. ಶಾಂತಾರಾಮ ನಿಧನಕ್ಕೆ ಸಂಸದ ನಳಿನ್ ಕುಮಾರ್ ಕಟೀಲು, ಅರಣ್ಯ ಸಚಿವ ರಮಾನಾಥ ರೈ, ಕಿನ್ನಿಗೋಳಿಯ ಯುಗಪುರುಷ ಸಂಪಾದಕದ ಕೆ. ಭುವನಾಭಿರಾಮ ಉಡುಪ, ತಮ್ಮ ಲಕ್ಷ್ಮಣ, ಚಂದ್ರಶೇಖರ ಸುವರ್ಣ ಮೂಲ್ಕಿ, ತುಳು ರಂಗ ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್, ನವೀನ್ ಪಡೀಲ್, ಕನ್ಯಾನ ಬಾಳೆಕೋಡಿ ಕಾಳಬೈರವೇಶ್ವರ ಶಿಲಾಂಜನ ಕ್ಷೇತ್ರದ ಶಶಿಕಾಂತ ಮಣಿ ಸ್ವಾಮೀಜಿ, ಆರೆಸ್ಸೆಸ್ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಜಿ.ಪಂ. ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಅಬ್ಬಾಸ್ ಆಲಿ, ರುಕ್ಮಯ ಪೂಜಾರಿ, ತುಕಾರಾಂ ಪೂಜಾರಿ, ತುಂಗಪ್ಪ ಬಂಗೇರ, ಹೈಡಾ ಸುರೇಶ್, ಉಮಾನಾಥ ಕೋಟ್ಯಾನ್, ಜೀವನ್ ರಾಂ ಸುಳ್ಯ ಅಂತಿಮ ದರ್ಶನ ಪಡೆದರು.