ಅಮಾನತುಗೊಂಡ ಶಿಕ್ಷಕರಿಗೆ ಜಿಲ್ಲೆಯಲ್ಲಿ ಮರುನೇಮಕ ಇಲ್ಲ: ಕೊರಗಪ್ಪ
ಸುಳ್ಯ: ಶಿಕ್ಷಕರ ಸಾಮೂಹಿಕ ಅಮಾನತಿನಿಂದ ಸುದ್ದಿ ಮಾಡಿದ ಆಲೆಟ್ಟಿ ಸರ್ಕಾರಿ ಪ್ರೌಢಶಾಲೆಗೆ ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ್ ಗುರುವಾರ ಭೇಟಿ ನೀಡಿದರು.
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ನಡೆದ ಪೋಷಕರ ಹಾಗೂ ಊರವರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಮಾನತುಗೊಂಡ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಮರು ನೇಮಕ ಮಾಡಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.
ಶಿಕ್ಷಕರ ಸಾಮೂಹಿಕ ಅಮಾನತಿನ ಪರಿಣಾಮವಾಗಿ ಹೊಸ ತಂಡ ಜವಾಬ್ದಾರಿ ವಹಿಸಿಕೊಂಡ ಹಿನ್ನೆಲೆಯಲ್ಲಿ ಪೋಷಕರ ಮತ್ತು ಊರವರ ಸಭೆಯನ್ನು ಶಿಕ್ಷಣ ಇಲಾಖೆ ಕರೆದಿತ್ತು. ಇದೇ ಸಂದರ್ಭದಲ್ಲಿ ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ್ ಶಾಲೆಗೆ ಆಗಮಿಸಿದ್ದುದರಿಂದ ಅವರೂ ಸಭೆಯಲ್ಲಿ ಭಾಗವಹಿಸಿದರು.
ಆರಂಭದಲ್ಲಿ ಶಾಲೆಗೆ ಭೇಟಿ ನಿಡಿದ ಅವರು ಶಾಲಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲೆಯವರು ಏರ್ಪಡಿಸಿದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾದರು.
ನೂತನ ತಂಡ: ಆರಂಭದಲ್ಲಿ ಶಾಲಾ ನೂತನ ಪ್ರಭಾರ ಮುಖ್ಯ ಶಿಕ್ಷಕ ಡಾ. ಸುಂದರ ಕೇನಾಜೆಯವರು ನೂತನ ತಂಡದ ಜವಾಬ್ದಾರಿ ವಹಿಸಿಕೊಂಡ ನಂತರದ ಬೆಳವಣಿಗೆ, ಶಾಲೆಗೆ ಅಗತ್ಯವಿರುವ ಸೌಲಭ್ಯಗಳು ಮತ್ತು ವಿದ್ಯಾರ್ಥಿಗಳ ಕಲಿಕೆಗೆ ಮಾಡಲಾಗಿರುವ ವ್ಯವಸ್ಥೆಗಳ ಬಗ್ಗೆ ತಿಳಿಸಿದರು. ಬಳಿಕ ಹೊಸ ಶಿಕ್ಷಕರು ತಮ್ಮ ಪರಿಚಯ ಮಾಡಿಕೊಂಡರು.
ಸಭೆಯಲ್ಲಿ ಅನಿಸಿಕೆ ವ್ಯಕ್ತಪಡಿಸಿದ ಊರವರು, ಇಲಾಖೆಯ ಕ್ರಮವನ್ನು ಸ್ವಾಗತಿಸಿ, ಈ ಶಿಕ್ಷಕರಿಂದಾಗಿ ನಮ್ಮ ಊರಿಗೆ ಅವಮಾನವಾಗಿದೆ. ಬಹಳಷ್ಟು ಹಿರಿಯರು ಕಷ್ಟಪಟ್ಟು ಕಟ್ಟಿ ಬೆಳೆಸಿದ ಶಾಲೆ ಇದು. ಎಲ್ಲರೂ ಘಟನೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಶಾಸಕರ ನಿರ್ಲಕ್ಷ್ಯ- ಟೀಕೆ: ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾಗಿರುವ ಶಾಸಕ ಎಸ್. ಅಂಗಾರ. ಶಾಲೆಗೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಮುತುವರ್ಜಿ ವಹಿಸಿಕೊಳ್ಳಬೇಕಿತ್ತು ಎಂದು ಪುರುಷೋತ್ತಮ ಕೋಲ್ಚಾರ್, ತೇಜಕುಮಾರ್ ಬಡ್ಡಡ್ಕ ಅಸಮಾಧಾನ ವ್ಯಕ್ತಪಡಿಸಿದರು. ಜಿ.ಪಂ. ಸದಸ್ಯೆ ಸರಸ್ವತಿ ಕಾಮತ್ ಕೂಡಾ ಇದಕ್ಕೆ ಧ್ವನಿಗೂಡಿಸಿದರು.
ಅಮಾನತು ಒಂದು ಶಿಕ್ಷೆಯಲ್ಲ. ಆದರೂ, ಯಾವುದೇ ಕಾರಣಕ್ಕೂ ಅಮಾನತುಗೊಂಡ ಶಿಕ್ಷಕರು ಮತ್ತೆ ಈ ಊರಿಗೆ ಬರುವುದು ಬೇಡ. ಈ ಕುರಿತು ಸಮಗ್ರ ತನಿಖೆ ಮಾಡಿ ಅವರ ಮೇಲೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಊರವರು ಆಗ್ರಹಿಸಿದರು.
ತಪ್ಪುಗಳ ಪುನರಾವರ್ತನೆ: ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ ಮಾತನಾಡಿ, ಆ ಶಿಕ್ಷಕರು ವ್ಯಕ್ತಿಗತವಾಗಿ ಸಮರ್ಥರೇ. ಆದರೆ, ಶಾಲೆಯಲ್ಲಿ ಮಾದರಿಯಾಗಿರಲಿಲ್ಲ. ಹಲವು ಬಾರಿ ಅವರಿಗೆ ತಪ್ಪು ತಿದ್ದಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತಾದರೂ ಅವರು ತಮ್ಮ ತಪ್ಪುಗಳನ್ನು ಪುನರಾವರ್ತನೆಗೊಳಿಸಿದರು. ಇದರಿಂದಾಗಿ ಇಲ್ಲಿಗೆ ಪೋಷಕರು ಮಕ್ಕಳನ್ನು ಸೇರಿಸದೆ ದೂರದ ಸುಳ್ಯದ ಶಾಲೆಗಳಿಗೆ ಸೇರಿಸುವಂತಾದರು. ಹಾಗೆ ಸೇರಿದ ಮಕ್ಕಳನ್ನು ಮತ್ತೆ ಇಲ್ಲಿಗೆ ಸೇರಿಸಲು ಮನವೊಲಿಸಲಾಗುವುದು. ಇದಕ್ಕೆ ಊರವರು ಕೂಡಾ ಸಹಕರಿಸಬೇಕು ಎಂದು ಹೇಳಿದರು.
ಲೆಕ್ಕ ಪತ್ರಗಳ ತನಿಖೆ: ಎಲ್ಲರ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಮಾತನಾಡಿದ ಜಿ.ಪಂ. ಅಧ್ಯಕ್ಷರು, ನನ್ನ ಜಿಲ್ಲೆಯಲ್ಲಿ ಈ ಘಟನೆ ನಡೆದಿರುವುದರಿಂದ ನನಗೂ ಅವಮಾನವಾಗಿದೆ. ಶಾಲೆಯ ಪೂರ್ಣ ಲೆಕ್ಕಪತ್ರಗಳನ್ನು ತನಿಖೆ ನಡೆಸುವಂತೆ ಡಿ.ಡಿ.ಪಿ.ಐ.ಯವರಿಗೆ ಸೂಚನೆ ನೀಡಿದರು.
ಜಿ.ಪಂ. ಸದಸ್ಯೆ ಸರಸ್ವತಿ ಕಾಮತ್, ತಾ.ಪಂ. ಸದಸ್ಯ ಜಯಪ್ರಕಾಶ್ ಕುಂಚಡ್ಕ, ಗ್ರಾ.ಪಂ. ಅಧ್ಯಕ್ಷೆ ರೋಹಿಣಿ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಮೋಸೆಸ್ ಜಯಶೇಖರ್, ಕ್ಷೇತ್ರ ಸಮನ್ವಯಾಧಿಕಾರಿ ಚಂದ್ರಶೇಖರ ಪೇರಾಲು, ಗ್ರಾ.ಪಂ. ಸದಸ್ಯರಾದ ಅಚ್ಚುತ ಮಾಸ್ತರ್, ಹರಿಪ್ರಸಾದ್ ಗಬ್ಬಲ್ಕಜೆ, ಎಸ್ಡಿಎಂಸಿ ಅಧ್ಯಕ್ಷ ಅಚ್ಚುತ ಮಣಿಯಾಣಿ ಇದ್ದರು.