ಗಂಗೊಳ್ಳಿ: ಅಸ್ಪೃಶ್ಯತೆ ಆಚರಣೆ ವಿರುದ್ಧ ದೂರು
ಉಡುಪಿ: ದೇಶದಾದ್ಯಂತ ಅಸ್ಪೃಶ್ಯತೆ ನಿಷೇಧ ಇದ್ದರೂ, ಉಡುಪಿಯಲ್ಲಿ ಅಸ್ಪೃಶ್ಯತೆಯ ಅಮಾನವೀಯ ಘಟನೆ ನಡೆದಿದೆ. ಇಲ್ಲಿನ ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷೆ ಸಾಕಮ್ಮ ಎಂಬವರ ಮದುವೆಯ ಸಂದರ್ಭದಲ್ಲಿ ಪುರೋಹಿತರು ಮತ್ತು ಇತರರು ಅಸ್ಪೃಶ್ಯತೆ ಆಚರಿಸಿದ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ಸಾಕಮ್ಮ ಅವರ ವಿವಾಹಕ್ಕೆ ನೆರೆಯ ತ್ರಾಸಿ ಗ್ರಾ.ಪಂ. ವ್ಯಾಪ್ತಿಯ ಅಣ್ಣಪ್ಪಯ್ಯ ಸಭಾ ಭವನವನ್ನು ಕಾಯ್ದಿರಿಸಲಾಗಿತ್ತು ಮತ್ತು ಸಭಾಭವನದ ಮಾಲೀಕರಿಗೆ ರು. 42,000 ಮುಂಗಡವನ್ನೂ ನೀಡಲಾಗಿತ್ತು. ಬುಧವಾರ ಬೆಳಗ್ಗೆ 11 ಗಂಟೆಗೆ ವಧೂವರರು ಸಭಾಭವನಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಅವರು ಕೊರಗ ಜಾತಿಯ ಸಂಪ್ರದಾಯದಂತೆ ಮದುವೆಗೆ ವಾದ್ಯದ ಬದಲು ಡೋಲು, ಚಂಡೆ ಬಾರಿಸಿದರು. ಇದನ್ನು ಗಮನಿಸಿದ ಪುರೋಹಿತರು ಮತ್ತು ಸಭಾಭವನದ ಸ್ವಚ್ಛತೆಯ ಮಹಿಳೆಯರು, 'ಇದು ಕೊರಗರ ಮದುವೆ ಈ ಮದುವೆಯ ಕಾರ್ಯ ನಾವು ಮಾಡುವುದಿಲ್ಲ ಹಾಗೂ ಅವರು ಉಂಡ ಬಾಳೆ ಎಲೆಯನ್ನು ನಾವು ತೆಗೆಯುದಿಲ್ಲ' ಎಂದು ಮದುವೆಗೆ ಬಂದ ಗಣ್ಯರ ಎದುರಿನಲ್ಲಿ ಜಾತಿ ನಿಂದನೆ ಮಾಡಿದರು. ಬಳಿಕ, ಮದುವೆ ಮಾಡಿಸದೆ ಸಭಾಭವನದಿಂದ ಹೊರಟು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಸಾಕಮ್ಮ ಸಹೋದರ ಈಶ್ವರ ಜಿ. ಎಂಬವರು ಗಂಗೊಳ್ಳಿ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಸಂಸ ಖಂಡನೆ: ಘಟನೆ ಬಗ್ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯ ಸಮಿತಿಯ ಸದಸ್ಯ ಸುಂದರ ಮಾಸ್ತರ್ ಮತ್ತು ಇತರ ಪದಾಧಿಕಾರಿಗಳು, ಗಂಗೊಳ್ಳಿಯಲ್ಲಿ ಅಸ್ಪೃಸ್ಯತೆ ಆಚರಿಸಿದವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.