ಧಾರಣಾ ಸಾಮರ್ಥ್ಯ ಸಮಗ್ರ ಅಧ್ಯಯನ ಅಗತ್ಯ: ಆಶೀಸರ
ಪುತ್ತೂರು: ಕುಮಾರಧಾರಾ ಬಚಾವೋ ಆಂದೋಲನ ನಡೆಯುವುದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪರಿಸರ ಧಾರಣಾ ಸಾಮರ್ಥ್ಯದ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಮತ್ತು ಸಾರ್ವಜನಿಕರಿಂದ ಪ್ರಯತ್ನಗಳು ನಡೆಯಬೇಕೆಂದು ಪಶ್ಚಿಮಘಟ್ಟ ಕಾರ್ಯಪಡೆಯ ನಿಕಟ ಪೂರ್ವಾಧ್ಯಕ್ಷ ಅನಂತ ಹೆಗಡೆ ಆಶೀಸರ ಆಗ್ರಹಿಸಿದರು.
ಅವರು ಗುರುವಾರ ಕುಮಾರಧಾರಾ ಪರಿಸರ ಸಂರಕ್ಷಣಾ ಸಮಿತಿ, ಪರಿಸರ ಅಧ್ಯಯನ ಕೇಂದ್ರ, ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು, ವೃಕ್ಷಲಕ್ಷ ಆಂದೋಲನ ಕರ್ನಾಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪುತ್ತೂರಿನ ಜಿ.ಎಲ್. ಸಭಾಭವನದಲ್ಲಿ ನಡೆದ ಕುಮಾರಧಾರಾ ನದಿ ಕಣಿವೆಯ ಪರಿಸ್ಥಿತಿ ಕುರಿತ ವಿಚಾರ ಸಂಕಿರಣ ಮತ್ತು ಕುಮಾರಧಾರಾ ಅರಣ್ಯ ಜೀವ ವೈವಿಧ್ಯ ಪರಿಸ್ಥಿತಿಯ ಅಧ್ಯಯನ ವರದಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕೃಷಿ ಅವಲಂಬಿತರ ಬದುಕು ಶೋಚನೀಯ: ಕುಮಾರಧಾರ, ಗುಂಡ್ಯ ಮತ್ತು ನೇತ್ರಾವತಿ ನದಿಗಳ ಮೇಲೆ ಈಗಾಗಲೇ ಸಾಕಷ್ಟು ಪ್ರಹಾರ ನಡೆದಿದ್ದು, ಇದನ್ನು ತಡೆಯುವ ಪ್ರಯತ್ನಗಳಾಗಬೇಕಾಗಿದೆ. ಅಣೆಕಟ್ಟುಗಳ ಸರಮಾಲೆಗಳು ಆಗಮಿಸುವುದರಿಂದ ಮತ್ತು ನದಿ ತಿರುವುಗಳ ಚಿಂತನೆಯಿಂದ ಇಲ್ಲಿನ ಕೃಷಿ ಅವಲಂಬಿತರ ಬದುಕು ಶೋಚನೀಯವಾಗುತ್ತಿದೆ ಎಂದರು.
ಉರುಂಬಿ ಅಣೆಕಟ್ಟು ಯೋಜನೆಯನ್ನು ಕೈ ಬಿಡುವಂತೆ ಸಂಬಂಧಿಸಿದ ಇಲಾಖೆಗೆ ಸಾಕಷ್ಟು ಒತ್ತಾಯಿಸಿದರೂ, ಅದರಿಂದ ಆಗಬಹುದಾದ ಅಪಾಯಗಳ ಬಗ್ಗೆ ಎಚ್ಚರಿಸಿದರೂ ಜಿಲ್ಲಾಡಳಿತ, ಸ್ಥಳೀಯಾಡಳಿತ ಮತ್ತು ಪೊಲೀಸರು ಈ ಕಂಪನಿಯನ್ನು ಓಡಿಸುವ ಕೆಲಸ ಮಾಡುತ್ತಿಲ್ಲ ಎಂದರು.
ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.