ಸಭೆಯಲ್ಲಿ ವಾಗ್ವಾದ
ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ್ ಭಾಗವಹಿಸಿದ ಆಲೆಟ್ಟಿ ಶಾಲಾ ಪೋಷಕರ ಹಾಗೂ ಊರವರ ಸಭೆಯಲ್ಲಿ ಭಾಗವಹಿಸಿದ ಕೆಲವರು ಅಮಾನತುಗೊಂಡ ಶಿಕ್ಷಕರ ಪರ ವಾದ ಮಂಡಿಸಿದ ಕಾರಣ ಸಭೆಯಲ್ಲಿ ವಾಗ್ವಾದ ನಡೆದ ಘಟನೆಯೂ ನಡೆಯಿತು.
ಸಭೆಯಲ್ಲಿದ್ದ ಹಳೆ ವಿದ್ಯಾರ್ಥಿಯೋರ್ವರು ಈ ಪ್ರಕರಣದಲ್ಲಿ ತಪ್ಪು ಮಾಡದವರೂ ಬಲಿಪಶುಗಳಾಗಿದ್ದಾರೆ. ಒಳ್ಳೆಯ ಪಾಠ ಮಾಡಿ ಒಳ್ಳೆಯ ಫಲಿತಾಂಶ ಬರಲು ಕಾರಣವಾದ ಶಿಕ್ಷಕರೂ ಅಮಾನತುಗೊಂಡಿದ್ದಾರೆ. ಅಂತವರನ್ನು ಮತ್ತೆ ಈ ಶಾಲೆಗೆ ಕರೆಸಬೇಕು ಎಂದು ಹೇಳಿದಾಗ ಗ್ರಾ.ಪಂ. ಸದಸ್ಯ ಹರಿಪ್ರಸಾದ್ ಗಬ್ಬಲ್ಕಜೆ ಇದನ್ನು ಖಂಡಿಸಿದರು. ಆಗ ಗರಂ ಆದ ಜಿ.ಪಂ. ಅಧ್ಯಕ್ಷರು, ಅವರ ಸಲಹೆಗೆ ನೀವು ಉತ್ತರ ನೀಡಬೇಕಾಗಿಲ್ಲ ಎಂದಾಗ ಕೆಲವರ ಆಕ್ರೋಶಕ್ಕೆ ಕಾರಣವಾಯಿತು.
ಕೊನೆಗೆ ಮಧ್ಯ ಪ್ರವೇಶಿಸಿದ ಸರಸ್ವತಿ ಕಾಮತ್, ಹರಿಪ್ರಸಾದ್ ನೋವಿನಿಂದ ಕೆಲವು ಮಾತು ಆಡಿದ್ದಾರೆ. ಜಿ.ಪಂ. ಅಧ್ಯಕ್ಷರು ಕೂಡಾ ಕಂಟ್ರೋಲಿಂಗ್ ಪವರ್ ಉಪಯೋಗಿಸಿದ್ದಾರೆ. ಈ ವಿವಾದ ಬೆಳೆಸುವುದು ಬೇಡ ಎಂದರು. ರಾತ್ರಿ ವೇಳೆ ಸ್ಪೆಷಲ್ ಕ್ಲಾಸ್ ಮಾಡಿ ಉತ್ತಮ ಫಲಿತಾಂಶ ತಂದ, ಬಡ ಮಕ್ಕಳಿಗೆ ಹಣ ಕೊಟ್ಟು ಓದಿಸಿದ ಶಿಕ್ಷಕರೂ ಅದರಲ್ಲಿದ್ದಾರೆ. ಹಾಗಾಗಿ ಶಿಕ್ಷಕರನ್ನೇ ದೂರುವುದು ಸರಿಯಲ್ಲ ಎಂದು ಸುದರ್ಶನ್ ಪಾತಿಕಲ್ಲು ಹೇಳಿದಾಗಲೂ ವಾಗ್ವಾದ ನಡೆಯಿತು. ಸರಸ್ವತಿ ಕಾಮತ್ ಮಾತಿನ ಮಧ್ಯೆ ಶಾಸಕರ ಜವಾಬ್ದಾರಿಯನ್ನು ಟೀಕಿಸಿದಾಗ ಆಕ್ಷೇಪಿಸಿದ ಸೊಸೈಟಿ ಅಧ್ಯಕ್ಷ ಕೃಪಾಶಂಕರ ತುದಿಯಡ್ಕ ಸಭೆಯಿಂದ ಹೊರನಡೆದ ಘಟನೆಯೂ ನಡೆಯಿತು.