ಸೀಮೆಎಣ್ಣೆ ಅಕ್ರಮ ದಾಸ್ತಾನು ವಶ
ಮಂಗಳೂರು: ನಗರದ ಹೊಯ್ಗೆಬಜಾರ್ನ ಗೋಡೌನ್ನಲ್ಲಿ ಇರಿಸಲಾಗಿದ್ದ ಅಕ್ರಮ 1,855 ಲೀಟರ್ ಸೀಮೆಎಣ್ಣೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿಗಳು ಮತ್ತು ಪಾಂಡೇಶ್ವರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿದ್ದಾರೆ.
ಇಲ್ಲಿನ ಭಗತ್ಸಿಂಗ್ ರಸ್ತೆ ಬಳಿಯ ದಾಮೋದರ ಕರ್ಕೇರ ಮಾಲಕತ್ವದ ಗೋಡೌನ್ಗೆ ಬುಧವಾರ ರಾತ್ರಿ ಮತ್ತು ಗುರುವಾರ ದಾಳಿ ನಡೆಸಲಾಗಿತ್ತು. ದಾಳಿ ವೇಳೆ 36 ಕ್ಯಾನ್ಗಳಲ್ಲಿ ಸೀಮೆಎಣ್ಣೆ ದಾಸ್ತಾನು, ಖಾಲಿ ಬಾಟಲ್ಗಳು ಸೇರಿದಂತೆ 90 ಲೀಟರ್ ಡೀಸೆಲ್ ಮಿಶ್ರಿತ ಸೀಮೆಎಣ್ಣೆಯನ್ನು ಪತ್ತೆಮಾಡಿ ವಶಪಡಿಸಲಾಯಿತು. ಮಳೆಗಾಲದಲ್ಲಿ ಇದನ್ನು ಅಕ್ರಮವಾಗಿ ದಾಸ್ತಾನಿರಿಸಿದ್ದು, ಸಮೀಪದ ಬೋಟ್ಗಳಿಗೆ ಮಾರಾಟ ಮಾಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ. ದಾಮೋದರ ಕರ್ಕೇರ ತಲೆಮರೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆಯೂ ಇದೇ ಗೋಡೌನ್ಗೆ ದಾಳಿ ನಡೆದಿದ್ದು, ಆತ ತನ್ನ ಕೃತ್ಯ ಮುಂದುವರಿಸಿದ್ದ. ಈತನ ಅಕ್ರಮಗಳ ಹಿಂದೆ ಪ್ರಭಾವಿ ವ್ಯಕ್ತಿಗಳು ಹಾಗೂ ಇಲಾಖೆಯ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಇಲಾಖೆ ಉಪನಿರ್ದೇಶಕ ಶರಣಬಸಪ್ಪ, ಸಹಾಯಕ ನಿರ್ದೇಶಕ ಸುರೇಶ್ ಕುಮಾರ್, ಪಾಂಡೇಶ್ವರ ಎಸ್ಐ ಸಿದ್ಧಪ್ಪ, ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.