ಹೆಚ್ಚುವರಿ ಸಂಕ ವಸೂಲಿ: ಮೀನು ಬುಟ್ಟಿ ಎಸೆದು ಗಲಾಟೆ
ಮೂಲ್ಕಿ: ಕಾರ್ನಾಡಿನ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರಿಂದ ಗುತ್ತಿಗೆದಾರ ಹೆಚ್ಚಿನ ಸುಂಕ ವಸೂಲಿಗೆ ಪ್ರಯತ್ನಿಸಿ, ಮಾರಟಗಾರ ಮಹಿಳೆಯಿಂದ ಮೀನಿನ ಬುಟ್ಟಿಯನ್ನು ಎಸೆದು ಗಲಾಟೆ ನಡೆಸಿದ ಘಟನೆ ನಡೆದಿದೆ.
ಬಳಿಕ ಪೊಲೀಸರ ಆಗಮನದ ಬಳಿಕ ಪರಿಸ್ಥಿತಿ ತಿಳಿಗೊಂಡಿದೆ. ಮೂಲ್ಕಿ ನಗರ ಪಂಚಾಯಿತಿಗೆ ಸಂಬಂಧಪಟ್ಟ ಮೂಲ್ಕಿಯ ಕಾರ್ನಾಡಿನ ಮೀನು ಮಾರುಕಟ್ಟೆಯಲ್ಲಿ ಕಳೆದ ವರ್ಷ ರು. 90,000 ಕ್ಕೆ ಟೆಂಡರ್ ಆಗಿದ್ದು, ಈ ಬಾರಿ ರು. 1,45,000ಕ್ಕೆ ಹೆಜಮಾಡಿಯ ವ್ಯಕ್ತಿಯೊಬ್ಬರು ಗುತ್ತಿಗೆ ಪಡೆದಿದ್ದರು. ಪ್ರತಿ ಮಹಿಳೆಯರಿಂದ ಬುಟ್ಟಿಗೆ ರು. 5 ರ ಬದಲು ರು. 10 ಹೆಚ್ಚುವರಿ ಹಣ ವಸೂಲು ಮಾಡಲಾಗುತ್ತಿತ್ತು. ಕೆಲವು ಮಹಿಳೆಯರು ಹೆಚ್ಚು ಬುಟ್ಟಿ ಇಟ್ಟರೆ ಅದಕ್ಕೆ ತಲಾ ರು. 10 ರಂತೆ ಪಡೆಯಲು ಪ್ರಯತ್ನಿಸುತ್ತಿದ್ದು, ಬುಧವಾರ ಸಂಜೆ ಮಹಿಳೆಯೊಬ್ಬರಿಂದ ಹೆಚ್ಚಿನ ಬುಟ್ಟಿಗೆ ಹಣ ಕೇಳಿದಾಗ ವಾಗ್ವಾದ ನಡೆದು ಗುತ್ತಿಗೆದಾರ ಮಹಿಳೆಯ ಬುಟ್ಟಿಯನ್ನು ಎಸೆದು ಚೆಲ್ಲಾಪಿಲ್ಲಿ ಮಾಡಿದ್ದ. ಬಳಿಕ ಸ್ಥಳಕ್ಕಾಗಮಿಸಿದ ಮೂಲ್ಕಿ ಪೊಲೀಸರು ಪರಿಸ್ಥಿತಿ ವಿಕೋಪಕ್ಕೆ ತೆರಳದಂತೆ ನಿಯಂತ್ರಿಸಿದರು.
ವಿಷಯ ತಿಳಿದ ಮೂಲ್ಕಿ ನಗರ ಪಂಚಾಯಿತಿ ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್ ಸ್ಥಳಕ್ಕೆ ಆಗಮಿಸಿ, ಬುಟ್ಟಿಗೆ ರು. 5 ರಿಂದ ಹೆಚ್ಚು ತೆಗೆದುಕೊಳ್ಳದಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿದರು. ಈ ಬಗ್ಗೆ ನಗರ ಪಂಚಾಯಿತಿನ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದಿದ್ದು, ಹೆಚ್ಚು ಹಣ ತೆಗೆದುಕೊಳ್ಳದಂತೆ ನಿರ್ಣಯಿಸಲಾಗಿದೆ.