ಉಪ್ಪಿನಂಗಡಿ ಗೋ ಅಪಹರಣ: ದೇಗುಲದಲ್ಲಿ ವಿಶೇಷ ಪ್ರಾರ್ಥನೆ
ಉಪ್ಪಿನಂಗಡಿ: ಇಲ್ಲಿನ ಸಹಸ್ರಲಿಂಗೇಶ್ವರ ದೇವಾಲಯದ ವಠಾರದಿಂದ ವಿಶ್ರಾಂತಿ ಪಡೆಯುತ್ತಿದ್ದ ದನ ಕರುಗಳನ್ನು ಅಮಾನುಷವಾಗಿ ಹೊತ್ತೊಯ್ದ ಹಾಗೂ ಈ ಸಂದರ್ಭದಲ್ಲಿ ಸ್ಥಳೀಯರಿಗೆ ತಲವಾರು ತೋರಿಸಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥರನ್ನು ದೇವರ ನ್ಯಾಯ ತೀರ್ಮಾನಕ್ಕೆ ಒಳಪಡಿಸಬೇಕೆಂದು ಶುಕ್ರವಾರದಂದು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಮಣ್ಣಿನ ಸಂಸ್ಕೃತಿಗೆ ಅನುಗುಣವಾಗಿ ಪೂಜ್ಯ ಭಾವನೆಯಿಂದ ಕಾಣುವ ಗೋವುಗಳನ್ನು ಇತ್ತೀಚಿನ ದಿನಗಳಲ್ಲಿ ಮಾಂಸಕ್ಕಾಗಿ ವಧಿಸಲು ಕದಿಯುವ, ಅಪಹರಿಸುವ ಕಾರ್ಯ ದುರುಳರಿಂದ ನಿರಾತಂಕವಾಗಿ ನಡೆಯುತ್ತಿದೆ. ಕಾಯುವ ವ್ಯವಸ್ಥೆಗಳು ಕಾಯದೇ ಇರುವಾಗ, ದಂಡಿಸುವ ಕೈಗಳು ದಂಡಿಸದೇ ಇರುವಾಗ, ನ್ಯಾಯ ರಕ್ಷಣೆಗಾಗಿ ದೇವರ ಮೊರೆ ಹೋಗುವ ಈ ಮಣ್ಣಿನ ಗುಣ ಧರ್ಮದಂತೆ ಶುಕ್ರವಾರ ದೇವಳದ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ಕರುಣಾಕರ ಸುವರ್ಣರ ನೇತೃತ್ವದಲ್ಲಿ ಶ್ರೀ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ದುರುಳರಿಗೆ ದೇವ ತೀರ್ಮಾನದಂತೆ ದುಷ್ಕೃತ್ಯ ಫಲ ಲಭಿಸಲಿ ಎಂದು ಯಾಚಿಸಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಹರಿರಾಮಚಂದ್ರ, ಕಂಗ್ವೆ ವಿಶ್ವಾನಾಥ ಶೆಟ್ಟಿ, ಧನ್ಯಕುಮಾರ್ ರೈ, ಕಾರ್ಯ ನಿರ್ವಹಣಾಧಿಕಾರಿ ಜಯಮ್ಮ, ಗಣ್ಯರಾದ ಸುಂದರ ಗೌಡ, ಹೇರಂಭ ಶಾಸ್ತ್ರಿ, ಯತೀಶ್ ಶೆಟ್ಟಿ, ಜಗದೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.