ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಿಂಞಣ್ಣ ರೈಗೆ 99ನೇ ಜನ್ಮದಿನದ ಸಂಭ್ರಮ

Mainashree
Updated On : 8 Jun 2013, 10:05 am

ಬಹುಮುಖ ಪ್ರತಿಭೆಯ ಹಿರಿಯ ಕವಿ, ಕಾಸರಗೋಡಿನ ನೆಚ್ಚಿನ ಜನನೇತಾರ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಅಧ್ಯಾಪಕ, ನೇಗಿಲ ಯೋಗಿ, ಸಾಮಾಜಿಕ ಸೇವಾ ಮನೋಭಾವದ ನಾಡೋಜ ಡಾ. ಕಯ್ಯಾರ ಕಿಂ್‌ಞಣ್ಣ ರೈ ಅವರ 99ನೇ ವರ್ಷದ ಜನ್ಮದಿನೋತ್ಸವ ಕಾರ್ಯಕ್ರಮ ಅವರ ಹುಟ್ಟೂರಾದ ಪೆರಡಾಲದ ಕವಿತಾ ಕುಟೀರದಲ್ಲಿ ಜೂ. 8ರಂದು ನಡೆಯಲಿದೆ.
ಕರಾವಳಿಯ ಮಹಾ ಕವಿಯಾಗಿ, ಸಾಹಿತಿಯಾಗಿ, ಉತ್ತಮ ವಾಗ್ಮಿಯಾಗಿ, ರಾಜಕಾರಣಿಯಾಗಿ, ಸ್ವಾತಂತ್ರ್ಯ ಹೋರಾಟಗಾರನಾಗಿ, ಕಾಸರಗೋಡಿನ ಕನ್ನಡಿಗರ ನೇತಾರನಾಗಿ, ಸಮಾಜಸೇವೆಗಾಗಿ ಮತ್ತಿತರ ಸೇವಾ ಸಂಸ್ಥೆಗಳಲ್ಲಿ ಕ್ರೀಯಾಶೀಲರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
1915ರ ಜೂ. 8ರಂದು ದುಗ್ಗಪ್ಪ ರೈ ಮತ್ತು ದೇಯಕ್ಕು ದಂಪತಿಯ ಪುತ್ರನಾಗಿ ಜನಿಸಿದ ಇವರಿಗೆ ತಮ್ಮ ಮೆಚ್ಚಿನ ಶಿಕ್ಷಕ ಅನಂತ ಭಟ್ಟರ ಬಗ್ಗೆ ಅಪಾರ ಗೌರವ.
ಕಿಂಞಣ್ಣ ರೈಗಳು ನೀರ್ಚಾಲಿನ ಸಂಸ್ಕೃತ ಕಾಲೇಜಿಗೆ ಸೇರಿ ಆ ಸಂಸ್ಥೆಯಲ್ಲಿ ಸಂಸ್ಕೃತ- ಕನ್ನಡ ಉಭಯ ಭಾಷೆಗಳಲ್ಲಿ ಸಮಾನ ಪ್ರಧಾನ್ಯವಿರುವ “G’ ವಿದ್ವಾನ್ ತರಗತಿಯಲ್ಲಿ 1935ರಲ್ಲಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾದರು. ಅದೇ ವರ್ಷ ಮಂಗಳೂರಿನ ಬಾಸೆಲ್ ಮಿಶನ್ ಸ್ಕೂಲ್‌ನಲ್ಲಿ ತಮ್ಮ ಪ್ರೌಢ ಶಿಕ್ಷಣ ಮುಗಿಸಿದರು. ಬಳಿಕ ಅವರು ಪ್ರಭಾತ ಮತ್ತು ಸ್ವದೇಶಾಭಿಮಾನಿ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿದ್ದರು. ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯದರ್ಶಿಯೂ ಆಗಿದ್ದರು.
ಸುದೀರ್ಘಾವಧಿಯ ಅಧ್ಯಾಪಕ ವೃತ್ತಿ: 1944ರಲ್ಲಿ ಪೆರಡಾಲದ ನವಜೀವನ ಹೈಸೂಲ್‌ನಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದ ಇವರು ಖಾಸಗಿಯಾಗಿ ಬಿ.ಎ, ಎಂ.ಎ ಪದವಿ ಪಡೆದರು. 32 ವರ್ಷಗಳ ಕಾಲ ಕ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸಿದರು.
ಇವರು ಸಾಹಿತ್ಯದಲ್ಲಿ ಮಾತ್ರವಲ್ಲದೇ, ಸಾಮಾಜಿಕ ಕ್ಷೇತ್ರದಲ್ಲಿಯೂ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಅವಿರೋಧವಾಗಿ ಆಯ್ಕೆಯಾಗಿ 15 ವರ್ಷ ಬದಿಯಡ್ಕ ಗ್ರಾಮ ಪಂಚಾಯತ್‌ನಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಇವರು ತಮ್ಮ ಅವಧಿಯಲ್ಲಿ ಬದಿಯಡ್ಕ ಗ್ರಾಪಂ ಸರ್ವತೋಮುಖ ಅಭಿವೃದ್ಧಿ ಕಂಡು ಅತ್ಯುತ್ತಮ ಗ್ರಾಪಂ ಪ್ರಶಸ್ತಿಯೂ ಲಭಿಸಿದೆ.
ಹಿಂದುಳಿದ ಪ್ರದೇಶಗಳಾದ ಉದಯಗಿರಿ ಮತ್ತು ವಿದ್ಯಾಗಿರಿಯಲ್ಲಿ ಪಂಚಾಯತ್ ಮೂಲಕ ಶಾಲೆ ತೆರೆದುದಲ್ಲದೇ ವಿದ್ಯಾಗಿರಿ ಶಾಲೆಗೆ ತಮ್ಮ ಮೆಚ್ಚಿನ ಹಾಗೂ ಪ್ರಥಮ ಗುರುವಾದ ಅನಂತ ಭಟ್ ಸ್ಮಾರಕ ಶಾಲೆ ಎಂದು ಹೆಸರಿಡುವ ಮೂಲಕ ತಮ್ಮ ಗುರುವಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಶಿಕ್ಷಕರ ಸಂಘದ ಅಧ್ಯಕ್ಷ, ಬದಿಯಡ್ಕ ನೇಕಾರ ಸಹಕಾರಿ ಸಂಘದ ನಿರ್ದೇಶಕ, ಬದಿಯಡ್ಕ ಸಹಕಾರಿ ಸಂಘದ ಅಧ್ಯಕ್ಷ, ಕೇರಳ ಸರ್ಕಾರದ ಕೊರಗ ಅಭಿವೃದ್ಧಿ ಸಮಿತಿ ಹಾಗೂ ಇನ್ನಿತರ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ನಾಡಿಗೆ ಹಿರಿಯಣ್ಣ: ಕಿಂಞಣ್ಣ ರೈ ಮತ್ತು ಉಂಞಕ್ಕೆ ದಂಪತಿಗೆ 6 ಗಂಡು ಮತ್ತು 2 ಹೆಣ್ಣು ಮಕ್ಕಳ ತುಂಬು ಸಂಸಾರ. ಹೆಸರಿನಲ್ಲಿ ಸಣ್ಣದಾಗಿದ್ದರೂ ಅಜಾನುಬಾಹು, ಅತ್ಯುನ್ನತ ವ್ಯಕ್ತಿತ್ವ, ಸ್ನೇಹಶೀಲರಾಗಿ, ಸಮಾಜದ ಎಲ್ಲರೊಂದಿಗೂ ಜಾತಿ, ಮತ, ಭಾವವಿಲ್ಲದೇ ಸ್ಪಂದಿಸಿ ಭಾವ ಜೀವಿಯಾಗಿ ಪ್ರಕೃತಿಯ ಆರಾಧಕರಾಗಿ, ಸ್ವಾತಂತ್ರ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯ ಮುಂಚೂಣಿ ನಾಯಕರಾಗಿ, ಕಾಸರಗೋಡು ವಿಲೀನಿಕರಣ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕರಾಗಿ, ಸಾಹಿತ್ಯ, ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಾಡಿಗೆ ಹಿರಿಯಣ್ಣರಾದರು.
ಶ್ರೀಮುಖ, ಐಕ್ಯಗಾನ, ಪುನರ್ನವ, ಮಕ್ಕಳ ಪದ್ಯಮಂಜರಿ, ಚೇತನ, ಪಂಚಮೀ, ಕೊರಗ ಮತ್ತು ಕೆಲವು ಕವನಗಳು, ಶತಮಾನದ ಗಾನ (111 ಕವನ ಸಂಕಲನ) ರತ್ನರಾಶಿ (ಜೀವನ ಚರಿತ್ರೆ), ಲಕ್ಷ್ಮೀಶನ ಕಥೆಗಳು, ಅನ್ನದೇವರು ಮತ್ತು ಇತರ ಕಥೆಗಳು, ಪರಶುರಾಮ, ವಿರಾಗಿಣಿ(ನಾಟಕ), ನವೋದಯ ವಾಚನಮಾಲೆ, ವ್ಯಾಕರಣ ಮತ್ತು ಪ್ರಬಂಧ ಹಾಗೂ ಇನ್ನೂ ಹಲವು ಸಾಹಿತ್ಯ ಕೃತಿಗಳು ಪ್ರಕಟಗೊಂಡಿವೆ. ಇವರ ಹಲವು ಕೃತಿಗಳು, ಅನೇಕ ಕವನಗಳು ವಿವಿಧ ವಿಶ್ವವಿದ್ಯಾಲಯದಲ್ಲಿ ಮತ್ತು ಪ್ರೌಢಶಾಲೆ ಪಠ್ಯ ಪುಸ್ತಕವಾಗಿವೆ.
ಹಲವಾರು ಪ್ರಶಸ್ತಿಗಳು: 1969ರಲ್ಲಿ ರಾಷ್ಟ್ರಪತಿಗಳಿಂದ ಶ್ರೇಷ್ಠ ಅಧ್ಯಾಪಕ ರಾಷ್ಟ್ರ ಪ್ರಶಸ್ತಿ, 1970ರಲ್ಲಿ ಕರ್ನಾಟಕ ರಾಜ್ಯಪಾಲರಿಂದ ಕನರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1985ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಸಹಿತ ವಿವಿಧ ಸರ್ಕಾರಗಳಿಂದ, ಮಠ, ಶಾಲಾ ಕಾಲೇಜುಗಳಿಂದ, ವಿವಿಧ ಸಂಘ ಸಂಸ್ಥೆಗಳು, ಅಭಿಮಾನಿ ಸಂಘಗಳಿಂದ ಪ್ರಶಶ್ತಿ, ಗೌರವ, ಸನ್ಮಾನಗಳು ಕಿಂಞಣ್ಣ ರೈ ಅವರಿಗೆ ಸಂದಿವೆ.
1988ರಲ್ಲಿ ಶಿರಸಿಯಲ್ಲಿ ಜರಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡಿನ ಕನ್ನಡಿಗರ ಧ್ವನಿಯನ್ನು ವಿವಿಧ ಸಮ್ಮೇಳನಗಳಲ್ಲಿ ಇವರು ಮಾರ್ದನಿಸಿದ್ದರು.
ಹಿರಿಯ ಜೀವಕ್ಕೀಗ 99ರ ಸಂಭ್ರಮ: ಡಾ. ಕಯ್ಯಾರ ಕಿಂಞಣ್ಣ ರೈ ಅವರ 99ನೇ ವರ್ಷದ ಜನ್ಮದಿನೋತ್ಸವ ಕಾರ್ಯಕ್ರಮದ ಅಂಗವಾಗಿ ಬದಿಯಡ್ಕ ಪೆರಡಾಲದ ಕವಿತಾ ಕುಟೀರದಲ್ಲಿ ಜೂ 8ರಂದು ಬೆಳಗ್ಗೆ 10ಕ್ಕೆ ಬದಿಯಡ್ಕದ ಕಯ್ಯಾರರ ಸ್ವಗೃಹ ಕವಿತಾ ಕುಟೀರದಲ್ಲಿ ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ 99ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕಯ್ಯಾರರ ಜನ್ಮಶತಮಾನೋತ್ಸವ ವರ್ಷಾಚರಣೆಯ ಯೋಜನೆಗೂ ಚಾಲನೆ ದೊರೆಯಲಿದೆ. ಕೇರಳ ಹಾಗೂ ಕರ್ನಾಟಕದ ಸಾಮಾಜಿಕ, ರಾಜಕೀಯ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಮಂಗಳೂರು ಜಿಲ್ಲೆಗಳ ಕನ್ನಡ, ತುಳು ಸಂಘ- ಸಂಸ್ಥೆಗಳಿಂದ ಗೌರವಾರ್ಪಣೆ ನಡೆಯಲಿದೆ.
ಸಾಹಿತ್ಯಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಈ ಹಿರಿಯ ಜೀವಕ್ಕೆ ರಾಷ್ಟ್ರಕವಿ ಪ್ರಶಸ್ತಿ, ಕರ್ನಾಟಕ ರತ್ನ, ಪದ್ಮಶ್ರೀ ಪ್ರಶಸ್ತಿ ನೀಡಬೇಕು. ಕರ್ನಾಟಕ ಸರ್ಕಾರ ಕಯ್ಯಾರರ ಸ್ವಗೃಹವನ್ನು ಡಾ. ಕಯ್ಯಾರ ಕಿಂಞಣ್ಣ ರೈ ಜನ್ಮಶತಮಾನೋತ್ಸವ ಸಾಹಿತ್ಯ ಭವನವನ್ನಾಗಿ ಪರಿವರ್ತಿಸಬೇಕು. ಅವರ ಸಾಹಿತ್ಯ ಕೃತಿಗಳ ರಕ್ಷಣೆಗಾಗಿ ಸುಸಜ್ಜಿತ ಗ್ರಂಥ ಭಂಡಾರ ನಿರ್ಮಾಣ ಮಾಡಬೇಕೆಂಬುದು ಕಯ್ಯಾರರ ಅಭಿಮಾನಿಗಳ ಒತ್ತಾಸೆಯಾಗಿದೆ.
- ರಾಮಚಂದ್ರ ಬಲ್ಲಾಳ್ ನಾಟೆಕಲ್ಲು, ಮುಳ್ಳೇರಿಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement