ಕೂಲಿ ಕುಟುಂಬ ಹುಡುಗ ಐಐಟಿ ಪ್ರವೇಶ
ಸುಬ್ರಹ್ಮಣ್ಯ: ಬಡ ಕೂಲಿ ಕಾರ್ಮಿಕನೊಬ್ಬನ ಪುತ್ರ ಕಷ್ಟಪಟ್ಟು ಕಲಿತು ಭುವನೇಶ್ವರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಗೆ ಪ್ರವೇಶ ಪಡೆಯುವಲ್ಲಿ ಸಫಲನಾಗಿದ್ದಾನೆ.
ಸುಬ್ರಹ್ಮಣ್ಯ ಸಮೀಪದ ಏನೆಕಲ್ನ ಸಿದ್ಧನಾಯ್ಕ- ಸುಶೀಲಾ ದಂಪತಿಯ ಮೂವರು ಮಕ್ಕಳ ಪೈಕಿ ಕೊನೆಯಾತ ಮಂಜುನಾಥ ಈ ಸಾಧನೆ ತೋರಿದ ಯುವಕ. ಈತನ ಮುಂದಿನ ಸಾಧನೆಗೆ ಉದಾರಿಗಳ ನೆರವು ಬೇಕಿದೆ.
ಮೈಸೂರಿನ ಹರಪ್ಪನಹಳ್ಳಿ ತಾಲೂಕಿನ ಭಾಗಳ್ಳಿ ಮೂಲದವರಾದ ಇವರು 20 ವರ್ಷಗಳ ಹಿಂದೆ ತುತ್ತಿನ ಚೀಲ ತುಂಬಿಸುವ ಸಲುವಾಗಿ ಕೂಲಿ ಅರಸುತ್ತಾ ಬಂದವರಿಗೆ ಏನೆಕಲ್ಲು ಆಸರೆ ನೀಡಿತು.
ಕೂಲಿ ಮಾಡುತ್ತಲೇ ಕಲಿಕೆ: ಇಲ್ಲಿ ನೆಲೆಯೂರಿ ಕೂಲಿ ಕೆಲಸ ಮಾಡುತ್ತಾ ಬಡತನದಲ್ಲಿ ಜೀವನ ಸಾಗಿಸುತ್ತಲೇ ಮಕ್ಕಳ ಶಿಕ್ಷಣಕ್ಕಾಗಿ ಕೈಲಾದಷ್ಟು ಸಹಕಾರ ನೀಡಿದ್ದಾರೆ ಹೆತ್ತವರು. ಅದರಲ್ಲೂ ತಾಯಿ ತನ್ನ ದುಡಿಮೆಯ ಬಹುತೇಕ ಜೀವನವನ್ನು ಈತನಿಗಾಗಿ ಮುಡಿಪಾಗಿಟ್ಟಿದ್ದರು.
ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಭೌತಶಾಸ್ತ್ರ, ಗಣಿತ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಬಿ.ಎಸ್ಸಿ. ಶಿಕ್ಷಣವನ್ನು ಶೇ. 82 ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ದೇಶದ 12 ಐ.ಐ.ಟಿ. ಕೇಂದ್ರಗಳ ಪೈಕಿ ಒಂದಾದ ಒಡಿಶಾದ ಭುವನೇಶ್ವದಲ್ಲಿ ಮೇ 10, 11 ರಂದು ನಡೆದ ಸಂದರ್ಶನಕ್ಕೆ ಹಾಜರಾಗಿ ಪ್ರವೇಶವನ್ನೂ ಗಿಟ್ಟಿಸಿದ್ದಾರೆ.
ಹೊಟೇಲ್, ಕೂಲಿ ಕೆಲಸ: ಆರಂಭದಿಂದಲೇ ಕಠಿಣ ಶ್ರಮ ಜೀವಿಯಾದ ಈತ, ಮನೆಯ ಬಡತನ ಹಿನ್ನೆಲೆಯಲ್ಲಿ ಶಾಲೆ ಸಮಯದ ನಂತರ ಹೊಟೇಲ್ನಲ್ಲಿ ಕೂಲಿ ಕಾರ್ಮಿಕನಾಗಿ, ರಜೆ ಸಮಯದಲ್ಲಿ ಕೂಲಿ ಕೆಲಸ ಮಾಡಿಕೊಂಡು ಈ ಮಟ್ಟಕ್ಕೆ ಏರಿದ್ದಾರೆ ಮಂಜುನಾಥ. ಈ ಹಾದಿಯಲ್ಲಿ ಸಾಗಬೇಕೇಂಬ ತನ್ನ ಕನಸಿಗೆ ಪುಸ್ತಕಗಳ ಕುರಿತಾಗಿ ಮಾರ್ಗದರ್ಶನ ನೀಡಿದವರು ಭೌತಶಾಸ್ತ್ರ ಪ್ರೊಫೆಸರ್ ಜಿ. ಗಣೇಶ್ ಪ್ರಭು ಎಂದು ಮಂಜುನಾಥ್ ಸ್ಮರಿಸಿಕೊಳ್ಳುತ್ತಾನೆ.
ಶಿಕ್ಷಣ ಪ್ರೇಮಿಗಳ ಸಹಕಾರ: ಆರಂಭದಿಂದ ಇಲ್ಲಿಯ ತನಕ ನೆರವಿಗೆ ಬಂದವರಲ್ಲಿ ಅನುಗ್ರಹ ಎಜ್ಯುಕೇಶನ್ ಸಂಸ್ಥೆ, ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ್ ಏನೆಕಲ್ ಮತ್ತಿತರರು. ಸಂದರ್ಶನ ಸೇರಿದಂತೆ ಇನ್ನಿತರ ವಿಷಯಕ್ಕೆ ಸಂಬಂಧಿಸಿದಂತೆ ದೂರದ ಪ್ರಯಾಣ ಸಂದರ್ಭ ತನಗೆ ಪ್ರಯಾಣ ಭತ್ಯೆ ಸೇರಿದಂತೆ ಇನ್ನಿತರ ಸೇವೆಯನ್ನು ಒದಗಿಸುವಲ್ಲಿ ಸುಬ್ರಹ್ಮಣ್ಯದ ಲೋಕೇಶ್ ಬಳ್ಳಡ್ಕ, ಉದ್ಯಮಿ ರವಿಕಕ್ಕೆಪದವು ಮುಂತಾದವರು ಈಗಾಗಲೇ ನೆರವು ನೀಡಿದ್ದಾರೆ.
ನೆರವು ಬೇಕಿದೆ: ಮಂಜುನಾಥ (ಸಂಪರ್ಕ-9902495359) ಸದ್ಯ ಐಐಟಿಗೆ ಪ್ರವೇಶ ಗಿಟ್ಟಿಸಿಕೊಂಡಿದ್ದು, ಆತನ ಮುಂದಿನ ವಿದ್ಯಾಭ್ಯಾಸ ವೆಚ್ಚಗಳಿಗೆ ಉದಾರಿಗಳ ಸಹಾಯ ಅಗತ್ಯವೆಂದು ಈವರೆಗೆ ಸಹಕಾರ ನೀಡಿದ ಹಿತೈಷಿಗಳು ಅಪೇಕ್ಷಿಸಿದ್ದಾರೆ. ಆತನಿಗೆ ಸಹಾಯ ನೀಡಲಿಚ್ಚಿಸುವವರು- ಮಂಗಳೂರಿನ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ: 2858101003675 (ಐಎಫ್ಸಿ ಸಂಖ್ಯೆ: ಸಿಎನ್ಆರ್ಬಿ 0002858)ಗೆ ಧನಸಹಾಯ ಮಾಡಬಹುದು.
ವಿಜ್ಞಾನಿ, ಸಂಶೋಧಕ ಆಗುವ ಕನಸು
ಐ.ಐ.ಟಿ.ನಲ್ಲಿ ಆರು ವರ್ಷ ಪೂರೈಸಿದ ಬಳಿಕ ಎಂ.ಎಸ್ಸಿ., ಪಿ.ಎಚ್.ಡಿ., ಎಂ.ಟೆಕ್. ಮಾಡಲು ಅವಕಾಶವಿದ್ದು ತನಗೆ ವಿಜ್ಞಾನಿ ಅಥವಾ ಸಂಶೋಧಕನಾಗಬೇಕೇಂಬ ಕನಸು ಇದೆ. ಹೆತ್ತವರ ಆಶೀರ್ವಾದ, ಶಿಕ್ಷಣ ಪ್ರೇಮಿಗಳ ಸಹಕಾರದಿಂದ ನಾನು ಈ ದಿಸೆಯಲ್ಲಿ ಕಠಿಣ ಪರಿಶ್ರಮದ ಮೂಲಕ ಹೆಚ್ಚಿನ ಸಾಧನೆ ಮಾಡುವಲ್ಲಿ ಶಕ್ತಿ ಮೀರಿ ಯತ್ನಿಸಿದ್ದೇನೆ. ಮುಂದೆ ಮತ್ತಷ್ಟು ಸಾಧನೆ ಹಾದಿಯಲ್ಲಿ ಸಾಗುವ ಮೂಲಕ ಹುಟ್ಟೂರಿಗೆ, ನಾಡಿಗೆ ದೇಶಕ್ಕೆ ಕೊಡುಗೆ ನೀಡುವ ಹಂಬಲವಿದೆ.