ಕೆಲ್ಸ ಮಾಡಿ ಇಲ್ಲಾ ಮನೆಗೆ ನಡೀರಿ: ವೈದ್ಯಾಧಿಕಾರಿಗಳ ಸಭೆಯಲ್ಲಿ ಖಾದರ್ ಕಟುನುಡಿ
ಮಂಗಳೂರು: ಸರಿಯಾಗಿ ಕೆಲಸ ಮಾಡಿ, ಇಲ್ಲ ಕೆಲಸ ಬಿಟ್ಟು ಮನೆಗೆ ಹೋಗಿ... ಆರೋಗ್ಯ ಸಚಿವ ಯು.ಟಿ. ಖಾದರ್ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗೆ ನೀಡಿದ ಎಚ್ಚರಿಕೆ.
ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ ಜಿಲ್ಲೆಯ ಎಲ್ಲ ವೈದ್ಯಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಸಂದರ್ಭಧಲ್ಲಿ ವೈದ್ಯರು ಕಚೇರಿ ಬಿಟ್ಟು ಹೊರಬರಬೇಕು.
ಜನರಿಗೆ ತೊಂದರೆ ಬಂದಾಗ ಉಳಿದ ಎಲ್ಲ ಕೆಲಸ ಬಿಟ್ಟು ರೋಗ ತಡೆಗೆ ಆದ್ಯತೆ ನೀಡಬೇಕು. ಸುಸಜ್ಜಿತ ಸಂಚಾರಿ ವಿಭಾಗ ರಚಿಸಿ, ಸಾಂಕ್ರಾಮಿಕ ರೋಗ ಪೀಡಿತ ಪ್ರದೇಶದ ಜನರ ರಕ್ತ ಮಾದರಿ ಸಂಗ್ರಹ ಮತ್ತು ಪರೀಕ್ಷೆಗೆ ಕ್ರಮ ಕೈಗೊಳ್ಳಬೇಕು ಎಂದರು.
ಸಾಂಕ್ರಾಮಿಕ ರೋಗ ತಡೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಾವು ಪ್ರಥಮ ಸಭೆಯಲ್ಲಿ ನೀಡಿದ ಮಾರ್ಗದರ್ಶನದಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಡೆಂಘೀ ಪೀಡಿತ ರೋಗಿಗಳು ಕಂಡು ಬಂದರೆ ಅವರನ್ನು ಭೇಟಿ ಮಾಡಿ ಚಿಕಿತ್ಸೆ ಬಗ್ಗೆ ಗಮನ ಹರಿಸಬೇಕು.
ವೈದ್ಯಕೀಯ ಸೌಲಭ್ಯ ಜತೆ ಗುತ್ತಿಗಾರು, ಶಿರಾಡಿ, ಸುಬ್ರಹ್ಮಣ್ಯದ ಜನರಿಗೆ ವೈದ್ಯಕೀಯ ಸೌಲಭ್ಯ ಒದಗಿಸಲು ಎರಡು ಸಂಚಾರಿ ಘಟಕ ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಸಚಿವರು ಸೂಚಿಸಿದರು. 'ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ದಿನ ಮಲೇರಿಯಾ ಹಾಗೂ ಡೆಂಘೀ ವರದಿಯನ್ನು ನನಗೆ ನೀಡಬೇಕು, ವರದಿ ನೀಡುವುದು ಮಾತ್ರ ಮುಖ್ಯ ಅಲ್ಲ. ಸೊಳ್ಳೆ ಉತ್ಪತ್ತಿ ತಡೆಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು. ಆಶಾ ಕಾರ್ಯಕರ್ತೆಯರು, ಎಎನ್‌ಎಂ ಮತ್ತು ತಾಲೂಕು ವೈದ್ಯಾಧಿಕಾರಿಗಳು ಫೀಲ್ಡ್‌ನಲ್ಲಿರಬೇಕು ಇದರ ಸಂಪೂರ್ಣ ಹೊಣೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯದ್ದು ಎಂದು ಸೂಚಿಸಿದರು.
ಮಂಗಳೂರು ಮಲೇರಿಯಾ ಹಾಗೂ ಡೆಂಘೀ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ಕೇಳಿದರು. ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಮಾನವೀಯತೆಯಿಂದ ವರ್ತಿಸುವಂತೆ ಸಲಹೆ ಮಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಎಲ್ಲ ಸವಲತ್ತು ನೀಡಲು ಸರ್ಕಾರ ಬದ್ಧವಿದೆ, ಯಾವುದೇ ಸಂಕೋಚ ಇಲ್ಲದೆ ಸೌಲಭ್ಯಗಳ ಪಟ್ಟಿ ಮಾಡಿ ಎಂದರು. ಇಂದು ಚರ್ಚೆಯಾದ ಸಮಸ್ಯೆಗಳಿಗೆ ಪರಿಹಾರ ಕಾಣಬೇಕು, ಮುಂದಿನ ಸಭೆಯಲ್ಲಿ ಪುನರಾವರ್ತನೆಯಾಗಬಾರದು ಎಂದು ತಾಕೀತು ಮಾಡಿದರು.