ಗ್ರಾಮೀಣ ಸೇವೆ ಮಾಡದ ವೈದ್ಯರಿಂದ ರು. 7 ಕೋಟಿ ದಂಡ ಸಂಗ್ರಹ : ಖಾದರ್
ಮಂಗಳೂರು: ಯುವ ವೈದ್ಯರಿಗೆ ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ ಒಂದು ವರ್ಷ ಸೇವೆ ಕಡ್ಡಾಯ ಗೊಳಿಸುವ ಕರಡು ಮಸೂದೆ ರಾಷ್ಟ್ರಪತಿಯವರ ಅಂಕಿತಕ್ಕೆ ಬಾಕಿ ಇದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ಉಳ್ಳಾಲದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದರು. ಹಿಂದೆ ವೈದ್ಯಕೀಯ ಪದವೀಧರರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸದಿದ್ದರೆ ದಂಡ ತೆರಬೇಕು ಎಂಬ ನಿಯಮ ಇತ್ತು. ಅದರಂತೆ ರಾಜ್ಯದ ಬೊಕ್ಕಸಕ್ಕೆ 7 ಕೋಟಿ ದಂಡದ ರೂಪದಲ್ಲಿ ಸಂಗ್ರಹವಾಗಿದೆ.
ಆದರೆ ಗ್ರಾಮೀಣ ಪ್ರದೇಶದಲ್ಲಿ ಇದರಿಂದ ವೈದ್ಯರ ಸೇವೆ ದೊರೆಯದೆ ತೊಂದರೆಯಾಗುತ್ತಿದೆ. ಆದ್ದರಿಂದ ಕಡ್ಡಾಯ ಗ್ರಾಮೀಣ ವೈದ್ಯಕೀಯ ನೀತಿ ರೂಪಿಸುವುದು ಅನಿವಾರ್ಯವಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು.
ರಾಜ್ಯದಲ್ಲಿ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 198 ಹುದ್ದೆಗಳಿಗೆ ಕೌನ್ಸೆಲಿಂಗ್ ಮೂಲಕ ನೇಮಕ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಖಾಲಿ ಇರುವ ಪರಿವೀಕ್ಷಣಾಧಿಕಾರಿ ಹುದ್ದೆಗಳನ್ನು ಗುತ್ತಿಗೆ ಆಧಾರ ಹಾಗೂ ನೇರ ನೇಮಕ ಮೂಲಕ ತುಂಬಲು ಸೂಚಿಸಲಾಗಿದೆ. ರಾಜ್ಯದ ತುರ್ತು ಆರೋಗ್ಯ ಸೇವೆಗೆ 104 ಉಚಿತ ದೂರವಾಣಿ ಸಂಖ್ಯೆ ಕರೆ ಮಾಡಬಹುದು. ವೈದ್ಯಕೀಯ ತುರ್ತು ಸೇವೆ ಜತೆಗೆ ವೈದ್ಯಕೀಯ ಸಂಬಂಧಿಸಿದ ಸಲಹೆ ಪಡೆಯಬಹುದಾಗಿದೆ.
ಉಳ್ಳಾದಲ್ಲಿ ಸುಸಜ್ಜಿತ ವೈದ್ಯಕೀಯ ಕೇಂದ್ರ (ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ) ಆರಂಭಕ್ಕೆ ಸಮೀಕ್ಷೆ ನಡೆಸಲು ಅಧಿಕಾರಿಗಳು ತಂಡ ಉಳ್ಳಾಲಕ್ಕೆ ಆಗಮಿಸಲಿದೆ ಎಂದರು.