ಸರ್ಕಾರಿ ಶಾಲೆಗಳಲ್ಲಿ ನ್ಯಾಪ್‌ಕಿನ್ ಬರ್ನ್ ಘಟಕ
ಮಂಗಳೂರು: ಶಾಲೆಗಳ ಶೌಚಾಲಯಗಳಲ್ಲಿ ಬ್ಲಾಕ್ ಆಗುವುದು ಹಿಂದಿನಿಂದಲೂ ಕೇಳಿಬರುತ್ತಿರುವ ದೂರು. ಇದನ್ನು ನಿವಾರಿಸುವ ಬಗ್ಗೆ ಶಾಲೆಗಳಲ್ಲಿ ಅಷ್ಟಾಗಿ ಗಮನಕೊಡುವುದೇ ಇಲ್ಲ. ಇದನ್ನು ಹೆಣ್ಣು ಮಕ್ಕಳು ಹೊರಗೆ ಹೇಳುವಂತೆಯೂ ಇಲ್ಲ, ನ್ಯಾಪ್‌ಕಿನ್ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದೆ ಪರದಾಡಬೇಕಾಗುತ್ತಿತ್ತು.
ಇದೀಗ ತಡವಾಗಿಯಾದರೂ ಎಚ್ಚೆತ್ತ ಶಿಕ್ಷಣ ಇಲಾಖೆ, ಶಾಲೆಗಳ ಶೌಚಾಲಯದಲ್ಲಿ ನ್ಯಾಪ್‌ಕಿನ್ ಬರ್ನ್ ಘಟಕ ಸ್ಥಾಪಿಸುತ್ತಿದೆ. ದ.ಕ. ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದು ಯಶಸ್ವಿಯಾಗಿದೆ. ಈಗ 6 ರಿಂದ 8ನೇ ತರಗತಿ ಹೊಂದಿರುವ ಜಿಲ್ಲೆಯ ಎಲ್ಲ ಸರ್ಕಾರಿ ಪ್ರಾಥಮಿಕ ಶಾಲೆಗಳ ಶೌಚಾಲಯಗಳು ಆಗಸ್ಟ್‌ನೊಳಗೆ ಪೂರ್ಣ ನ್ಯಾಪ್‌ಕಿನ್ ಬರ್ನ್ ಘಟಕ ಹೊಂದಲಿದೆ. ಈ ಮೂಲಕ ನ್ಯಾಪ್‌ಕಿನ್ ಬರ್ನ್ ಘಟಕ ಹೊಂದಿರುವ ರಾಜ್ಯದ ಮೊದಲ ಜಿಲ್ಲೆ ದ.ಕ. ಎನಿಸಲಿದೆ.
ಸರ್ವ ಶಿಕ್ಷಣ ಅಭಿಯಾನದಲ್ಲಿ ಕಳೆದ ವರ್ಷ ನಕ್ಸಲ್ ಬಾಧಿತ ಪ್ರದೇಶದ 24 ಸರ್ಕಾರಿ ಶಾಲೆಗಳ ಶೌಚಾಲಯಗಳಲ್ಲಿ ಪ್ರಾಯೋಗಿಕವಾಗಿ ನ್ಯಾಪ್‌ಕಿನ್ ಬರ್ನ್ ಘಟಕ ರಚಿಸಲಾಗಿತ್ತು.
ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ: ಈಗಿನ ದಿನಗಳಲ್ಲಿ ಹೆಣ್ಮಕ್ಕಳು ಬೇಗನೆ ಪ್ರಾಯಪ್ರಬುದ್ಧರಾಗುವುದರಿಂದ ಪ್ರಾಥಮಿಕ ಶಾಲೆಗಳ ಶೌಚಾಲಯಗಳಲ್ಲಿ ನ್ಯಾಪ್‌ಕಿನ್ ಬರ್ನ್ ಘಟಕ ರೂಪಿಸುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಶಿಕ್ಷಣ ಇಲಾಖೆ ಬಂದಿದೆ. ಇದಕ್ಕೆ ಪೂರಕವಾಗಿ ಪ್ರಾಥಮಿಕ ಶಾಲೆಯಲ್ಲಿ ಹೆಣ್ಮಕ್ಕಳಿಗೆ ಹದಿಹರೆಯ ಬಗ್ಗೆ ತಿಳುವಳಿಕೆ ಶಿಕ್ಷಣ ನೀಡಲಾಗುತ್ತಿದೆ. ಯಾವುದೇ ಭಯ, ಸಂಕೋಚ ಹೊಂದದೆ ಆತ್ಮವಿಶ್ವಾಸದಿಂದ ಹೆಣ್ಮಕ್ಕಳು ಶಾಲೆಗೆ ಬರಬೇಕು ಎಂಬ ದಿಶೆಯಲ್ಲಿ ಇದನ್ನು ಅಸ್ತಿತ್ವಕ್ಕೆ ತರಲಾಗಿದೆ. ಈಗಾಗಲೇ 20 ಸರ್ಕಾರಿ ಪ್ರೌಢಶಾಲೆಗಳಲ್ಲಿ ನ್ಯಾಪ್‌ಕಿನ್ ಬರ್ನ್ ಘಟಕ ಇದೆ. ಬಾಕಿ ಇರುವ ಶಾಲೆಗಳಲ್ಲೂ ಘಟಕ ರಚನೆಗೆ ಇಲಾಖೆ ಕ್ರಮ ಕೈಗೊಳ್ಳಲಿದೆ. ವಿಪರ್ಯಾಸ ಎಂದರೆ, ವಿದ್ಯಾರ್ಥಿನಿಯರೇ ತುಂಬಿರುವ ಖಾಸಗಿ ಶಾಲೆಗಳಲ್ಲಿ ಇಂಥ ಘಟಕ ಇಲ್ಲ. ಪದವಿ ಕಾಲೇಜುಗಳಲ್ಲೂ ಇದೇ ಸ್ಥಿತಿ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.
ಸರಳ ವಿನ್ಯಾಸ ನಿರ್ಮಾಣ: ನ್ಯಾಪ್‌ಕಿನ್ ಬರ್ನ್ ಘಟಕವನ್ನು ಹಾಲಿ ಶೌಚಾಲಯ ಅಥವಾ ಹೊಸದಾಗಿ ನಿರ್ಮಿಸುವ ಶೌಚಾಲಯದಲ್ಲಿ ರಚಿಸಬಹುದು. ಇದಕ್ಕೆ ಬೇಕಾದ್ದು ಇಟ್ಟಿಗೆ, ಕಲ್ಲು, ಮರಳು, ಸಿಮೆಂಟ್, ನೆಟ್ ಮತ್ತು ಹೊಗೆ ನಳಿಕೆ. ಶೌಚಾಲಯದ ಒಳಭಾಗದಲ್ಲಿ ಸರಳ ವಿನ್ಯಾಸದಲ್ಲಿ ರಚಿಸಬಹುದು. ಹೊರಭಾಗದಿಂದ ಬೆಂಕಿ ಹಾಕುವಂತೆ ರೂಪಿಸಬೇಕು. ಉಪಯೋಗಿಸಿದ ನ್ಯಾಪ್‌ಕಿನ್‌ನ್ನು ಶೌಚಾಲಯದ ಒಳಗೆ ಕಿಂಡಿಗೆ ಹಾಕಬೇಕು. ಅದು ತಳಭಾಗದಲ್ಲಿರುವ ನೆಟ್‌ನಲ್ಲಿ ನಿಲ್ಲುತ್ತದೆ. ವಾರಕ್ಕೊಮ್ಮೆ ಅಥವಾ ವಾರದಲ್ಲಿ ಎರಡು ಸಲ ಹೊರಗಿನಿಂದ ಅಡಿಭಾಗಕ್ಕೆ ಬೆಂಕಿ ಹಾಕಿದರೆ ಮುಗಿಯಿತು. ಎಲೆಕ್ಟ್ರಾನಿಕ್ ಬರ್ನಿಂಗ್ ಕಿಟ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವಾದರೂ, ಅದು ಶಾಲೆಗಳಿಗೆ ಉಪಯುಕ್ತವಾಗಿಲ್ಲ. ಅವು ಕೆಟ್ಟುಹೋದರೆ ದುರಸ್ತಿ ಕಷ್ಟ. ಕೆಲವು ಸರ್ಕಾರಿ ಕಚೇರಿಗಳಲ್ಲಿ ದುರಸ್ತಿಯಾಗದೆ ಇದೆ.
ಕಡಿಮೆ ವೆಚ್ಚ ಸಾಕು: ಈ ವಿಧಾನ ಅಳವಡಿಸಲು ಎರಡೂವರೆಯಿಂದ ನಾಲ್ಕು ಸಾವಿರ ಸಾಕು. ಶೌಚಾಲಯ ಹಣದಲ್ಲೇ ಇದನ್ನು ಹೊಂದಿಸಬಹುದು. ಪ್ರತ್ಯೇಕ ಅನುದಾನ ಬೇಕಾಗಿಲ್ಲ. ವಿಶೇಷ ಮಕ್ಕಳ ಶೌಚಾಲಗಳಲ್ಲೂ ಬರ್ನ್ ಘಟಕ ರಚಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ ವರ್ಷದ ಪ್ರಾಯೋಗಿಕವಾಗಿ ಯಶಸ್ವಿಯಾದ ಬರ್ನ್ ಘಟಕಕ್ಕೆ ಶಿಕ್ಷಣ ಇಲಾಖೆ ಮೆಚ್ಚುಗೆ ಸೂಚಿಸಿದ್ದು, ಈ ಬಾರಿ ಎಲ್ಲ ಶಾಲೆಗಳಲ್ಲಿ ಅಳವಡಿಸುವಂತೆ ಸೂಚಿಸಿದೆ. ಇನ್ನು ಎರಡು ತಿಂಗಳಲ್ಲಿ ಅಳವಡಿಕೆ ಪೂರ್ತಿಯಾಗಲಿದೆ ಎನ್ನುತ್ತಾರೆ ಸರ್ವ ಶಿಕ್ಷಣ ಅಭಿಯಾನ ಸಹ ಸಂಯೋಜಕ ಶಿವಪ್ರಕಾಶ್.