ಸುದ್ದಿ ಸಂಕ್ಷೇಪ
ಬಾಲಕ ನಾಪತ್ತೆ: ನದಿ ದಾಟುವಾಗ ನೀರುಪಾಲಾಗಿರುವ ಶಂಕೆ
ಉಪ್ಪಿನಂಗಡಿ: ಕಡಬ ಠಾಣಾ ವ್ಯಾಪ್ತಿಯ ಆಲಂಕಾರು ಗ್ರಾಮದ ಕೊಂಡಾಡಿ ಕಾಯರ್ಮಲೆ ಯಾದವ ಪೂಜಾರಿ ಪುತ್ರ ರಕ್ಷಿತ್ (16) ಎಂಬಾತ ಜೂನ್ 6ರಿಂದ ನಾಪತ್ತೆಯಾಗಿದ್ದು, ಕುಮಾರಧಾರಾ ನದಿಯಲ್ಲಿ ಕೊಚ್ಚಿ ಹೋಗಿರುವ ಶಂಕೆ ಮೂಡಿ, ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.
ಆಲಂಕಾರು ಗ್ರಾಮದ ಕೊಂಡಾಡಿ ಕಾಯರ್ಮಲೆ ಯಾದವ ಪೂಜಾರಿ ಗಾರೆ ಕೆಲಸದ ಗುತ್ತಿಗೆದಾರರಾಗಿದ್ದು, ಕಾರ್ಮಿಕರಿಗೆ ಸಂಬಳ ಪಾವತಿಸಲು ಹಣದೊಂದಿಗೆ ಕಳುಹಿಸಿದ್ದ ಮಗ ರಕ್ಷಿತ್ ಕಾರ್ಮಿಕರನ್ನು ಭೇಟಿ ಮಾಡಿ ಹಣ ಪಾವತಿಸಿ ಹಿಂತಿರುಗಿದ ವಿಚಾರ ತಿಳಿದಿದೆ. ಬಳಿಕ ರಕ್ಷಿತ್ ದೈಪಿಲದ ಅಂಗಡಿಯೊಂದರಲ್ಲಿ ತಿಂಡಿ ತೆಗದುಕೊಂಡು ಮನೆಕಡೆಗೆ ಕಣಿಲೆಗುಂಡಿ ದಾರಿಯಾಗಿ ಬರುತ್ತಿರುವುದನ್ನು ನೋಡಿರುವುದಾಗಿಯು ಸ್ಥಳೀಯರು ತಿಳಿಸಿದ್ದು, ರಕ್ಷಿತ್ ನದಿದಾಟುವ ಸಂದರ್ಭದಲ್ಲಿ ನೀರಲ್ಲಿ ಕೊಚ್ಚಿ ಹೋಗಿರ ಬಹುದೇ ಎಂಬ ಶಂಕೆ ಕಾಡುತ್ತಿದೆ. ಗುಂಡ್ಯ ಅಣೆಕಟ್ಟಿನಿಂದ ದಿಢೀರ್ ಆಗಿ ಬಿಟ್ಟ ನೀರಿನ ಸೆಳೆತಕ್ಕೆ ಸಿಲುಕಿ ರಕ್ಷಿತ್ ನೀರು ಪಾಲಾಗಿರಬಹುದೆಂಬ ಶಂಕೆ ಮನೆ ಮಂದಿಯನ್ನು ಕಂಗಾಲುಗೊಳಿಸಿದೆ. ಸಾಲದ್ದಕ್ಕೆ ರಕ್ಷಿತ್ ನದಿ ದಾಟಿದ ಪರಿಸರದಲ್ಲಿ ಮೊಸಳೆಗಳ ಇರುವಿಕೆಯ ಮಾಹಿತಿಯೂ ಇದ್ದು ಶಂಕೆಯನ್ನು ಮತ್ತಷ್ಟೂ ಬಲಗೊಳಿಸಿದೆ.
ಅಡುಗೆ ಸಹಾಯಕ ವಜಾ
ಮಂಗಳೂರು: ಬಂಟ್ವಾಳ ವಾಮದಪದವು ಹಿಂದುಳಿದವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ಪದವಿಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಅಡುಗೆ ಸಹಾಯಕ ವೇಣುಗೋಪಾಲ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂಜು ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನರೇಟರ್ ಕದ್ದ ಮೂವರ ಸೆರೆ
ಮಂಗಳೂರು: ಕೈಕಂಬದಲ್ಲಿ ಮನೆ ಮುಂದೆ ನಿಲ್ಲಿಸಿದ ಜನರೇಟರ್ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಅನ್ಸಾರ್ ಕರಿಯಂಗಳ, ಇಬ್ರಾಹಿ ಖಲೀಲ್ ಕರಿಯಂಗಳ, ಹೈದರ್ ಉಳ್ಳಾಲ ಬಂಧಿತರು. ಕೈಕಂಬ ಪ್ರವೀಣ್ ರೋಡ್ರಿಗಸ್ ಮನೆ ಎದುರು ನಿಲ್ಲಿಸಿದ್ದ 4.5 ಲಕ್ಷ ಮೌಲ್ಯದ ಜನರೇಟರ್ ಮೇ 29ರಂದು ಕಳವು ಮಾಡಿದ್ದರು.
ಕಡಲಲ್ಲಿ ಮುಳುಗುತ್ತಿದ್ದ ವೃದ್ದರ ರಕ್ಷಣೆ
ಮಂಗಳೂರು: ಪಣಂಬೂರು ಕಡಲ ತೀರದಲ್ಲಿ ಕೊಚ್ಚಿ ಹೋಗುತ್ತಿದ್ದ ಬೆಂಗಳೂರು ಬನಶಂಕರಿ ನಿವಾಸಿ ಕೇಶವ ಮೂರ್ತಿ(73) ಜೀವರಕ್ಷದಳದವರು ರಕ್ಷಿಸಿದ್ದಾರೆ. ಶುಕ್ರವಾರ ಬೆಳಗ್ಗಿನ ಜಾವ 7.15ಕ್ಕೆ ಕೇಶವಮೂರ್ತಿ ಈಜಲು ತೆರಳಿದ್ದು, ತೆರೆಗಳ ನಡುವೆ ಅಪಾಯಕ್ಕೆ ಸಿಲುಕಿದ್ದರು. ಇದು ಈ ವರ್ಷದ 77ನೇ ಜೀವರಕ್ಷಣೆ ಎಂದು ಯತೀಶ್ ಬೈಕಂಪಾಡಿ ತಿಳಿಸಿದ್ದಾರೆ.
ನೆತ್ರಕೆರೆ: ನಿಯಂತ್ರಣ ತಪ್ಪಿ ಕಾರು ಪಲ್ಟಿ
ವಿಟ್ಲ: ವಿಟ್ಲ- ಸಾಲೆತ್ತೂರು ರಸ್ತೆಯ ನೆತ್ರಕೆರೆ ಎಂಬಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಗೆ ಉರುಳಿ ಬಿದ್ದ ಪರಿಣಾಮ ಇಬ್ಬರು ಅಪಾಯದಿಂದ ಪಾರಾದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ವಿಟ್ಲ ನಿವಾಸಿ ಪ್ರಸಾದ್ಗೆ ಸೇರಿದ ಕಾರು ಇದು ಎಂದು ತಿಳಿದು ಬಂದಿದೆ. ಬಳಿಕ ಸ್ಥಳೀಯರು ಹರಸಾಹಸಪಟ್ಟು ಕಾರನ್ನು ಮೇಲೆತ್ತಿದ್ದಾರೆ. ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ.
ರಸ್ತೆ ಮಧ್ಯೆ ಛಿದ್ರಗೊಂಡ ಶವ ಪತ್ತೆ
ಪಡುಬಿದ್ರಿ: ಇಲ್ಲಿನ ತೆಂಕ ಎರ್ಮಾಳಿನ ಕಲ್ಸಂಕ ಸೇತುವೆ ಬಳಿ ರಸ್ತೆಯ ಮಧ್ಯೆ ಅಪರಿಚಿತ ವ್ಯಕ್ತಿಯ ಮೃತದೇಹ ಛಿಧ್ರವಾಗಿರುವ ರೀತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ.
ಪಡುಬಿದ್ರಿ ಪೊಲೀಸರು ಕರ್ತವ್ಯದಲ್ಲಿದ್ದಾಗ ದೊರೆತ ಮಾಹಿತಿ ಮೇರೆಗೆ ಸಿಬ್ಬಂದಿ ಜತೆ ತೆಂಕ ಎರ್ಮಾಳು ಗ್ರಾಮದ ಕಲ್ಸಂಕ ಸೇತುವೆ ಬಳಿ ಹೋಗಿ ನೋಡಿದಾಗ ಸುಮಾರು 35-40 ವರ್ಷ ಪ್ರಾಯದ ಪರಿಚಿತ ಗಂಡಸಿನ ಮೃತದೇಹದ ಮೇಲೆ ವಾಹನವು ಹರಿದು ದೇಹವೆಲ್ಲ ಛಿದ್ರವಾಗಿರುವ ರೀತಿಯಲ್ಲಿ ಕಂಡುಬಂದಿದೆ.
ಯಾವುದೋ ವಾಹನ ಚಾಲಕ ವಾಹನವನ್ನು ಅತಿವೇಗ ಹಾಗೂ ಅಜಾಕರೂಕತೆಯಿಂದ ಚಲಾಯಿಸಿ ಈತನಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಮೃತಪಟ್ಟಿದ್ದಾನೆ. ನಂತರ ಇತರ ವಾಹನಗಳು ಮೃತದೇಹದ ಮೇಲೆ ಹರಿದಿರುವುದರಿಂದ ಛಿದ್ರಛಿದ್ರವಾಗಿದೆ ಎಂದು ಶಂಕಿಸಲಾಗಿದೆ.
ಸ್ಥಳದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದ ಪರಿಣಾಮ ಯಾವುದೇ ವಾಹನಗಳ ಬ್ರೇಕ್ ಗುರುತು ಇತ್ಯಾದಿ ಕಂಡುಬಂದಿರುವುದಿಲ್ಲ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಕ್ರಮ ಮದ್ಯ ವಶ; ಇಬ್ಬರ ಸೆರೆ
ಉಡುಪಿ: ಅಕ್ರಮವಾಗಿ ಮದ್ಯ ವಶದಲ್ಲಿರಿಸಿಕೊಂಡಿದ್ದ ಇಬ್ಬರು ವ್ಯಕ್ತಿಗಳನ್ನು ದಸ್ತಗಿರಿ ಮಾಡಿದ ಪ್ರಕರಣ ಶುಕ್ರವಾರ ನಡೆದಿದೆ.
ಆರೋಪಿಗಳಾದ ಸಂಜೀವ ನಾಯ್ಕ್ ಎಂಬಾತ ಸುಮಾರು 16.5 ಲೀಟರ್ ಅಕ್ರಮ ಮದ್ಯ ಹಾಗೂ ಸಾಯಿನಾಥ್ 8.3 ಲೀಟರ್ ಮದ್ಯವನ್ನು ಯಾವುದೇ ಪರವಾನಗಿ ಇಲ್ಲದೆ ವಶದಲ್ಲಿರಿಸಿಕೊಂಡಿದ್ದರಿಂದ ಆರೋಪಿಗಳನ್ನು ದಸ್ತಗಿರಿ ಮಾಡಿ ಅವರ ಬಳಿಯಿದ್ದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.