ಸುದ್ದಿ ಸಂಕ್ಷೇಪ
ಗೃಹ ಸಚಿವ ಪ್ರವಾಸ ಮುಂದೂಡಿಕೆ
ಉಡುಪಿ: ವಿಧಾನ ಮಂಡಲ ಅಧಿವೇಶನ 12ರವರೆಗೆ ಮುಂದುವರಿಯುವುದರಿಂದ ಗೃಹ ಸಚಿವ ಕೆ.ಜೆ. ಜಾರ್ಜ್ ಅವರ ಕೊಡಗು, ಉಡುಪಿ- ಚಿಕ್ಕಮಗಳೂರು ಮತ್ತು ದ.ಕ. ಜಿಲ್ಲೆಗಳ ಭೇಟಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಗೃಹ ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆತಿಳಿಸಿದೆ.
10ರಂದು ಪರಿಸರ ದಿನಾಚರಣೆ
ಕುಂದಾಪುರ: ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಆವರಣದಲ್ಲಿ 10ರಂದು ಬೆಳಗ್ಗೆ 10.30ಕ್ಕೆ ಪರಿಸರ ಸಂರಕ್ಷಣೆ ಕೈಗೊಳ್ಳುವ ಉದ್ದೇಶದಿಂದ ಆರಂಭವಾಗಿರುವ ಗ್ರೀನ್ ಇಂಡಿಯಾ ಮೂವ್‌ಮೆಂಟ್ ಉದ್ಘಾಟನಾ ಸಮಾರಂಭ ಜರುಗಲಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಉದ್ಘಾಟಿಸುವರು. ವೇ.ಮೂ. ರಾಮಚಂದ್ರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರು ವಿವಿ ವೃತ್ತ ಗ್ರಂಥಾಲಯಾಧಿಕಾರಿ ರಾಮಸ್ವಾಮಿ ಗೌಡ, ಜಾನಪದ ತಜ್ಞ ಡಾ.ಎನ್. ಆರ್. ನಾಯಕ್ ಪಾಲ್ಗೊಳ್ಳಲಿದ್ದಾರೆ.
ಪುನರೂರು: ನೃತ್ಯಾವಧಾನ ಕಾರ್ಯಾಗಾರ ಸಮಾಪನ
ಮಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಜೂ. 3 ರಿಂದ 7ರವರೆಗೆ ಪುನರೂರಿನಲ್ಲಿ ನಡೆದ 5 ದಿನಗಳ ನೃತ್ಯಾವಧಾನ ಕಾರ್ಯಗಾರದಲ್ಲಿ 84 ಮಂದಿ ಕಲಾವಿದರು ತರಬೇತಿ ಪಡೆದಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ ಹೇಳಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುನರೂರಿನ ಶ್ರೀ ವಿಶ್ವನಾಥಸ್ವಾಮಿ ದೇವಸ್ಥಾನದಲ್ಲಿ ನಡೆದ ಕಾರ್ಯಾಗಾರದಲ್ಲಿ 74 ಮಂದಿ ಯುವತಿಯರು, 10 ಮಂದಿ ಯುವಕರು ಪಾಲ್ಗೊಂಡಿದ್ದರು. ಯುವ ಜನತೆಯ ಪಾಲ್ಗೊಳ್ಳುವಿಕೆ ಸಂತೃಪ್ತಿ ತಂದಿದೆ ಎಂದು ಹೇಳಿದರು. ಕರಾವಳಿ ಕಲಾವಿದರಲ್ಲಿ ಯಕ್ಷಗಾನ ಕಲೆಯ ಸೂಕ್ಷ್ಮತೆಯಿದ್ದು, ಬೇಗನೆ ನೃತ್ಯದ ಪ್ರಕಾರವನ್ನು ಕಲಿಯುತ್ತಿದ್ದಾರೆ. ಚೆನ್ನೈ, ಹಾವೇರಿ, ಬಳ್ಳಾರಿ, ಬೆಂಗಳೂರು, ಉಡುಪಿ, ಪುತ್ತೂರು, ಬೈಂದೂರು, ಮಂಗಳೂರಿನಿಂದ ನೃತ್ಯ ಕಲಾವಿದರು ಆಗಮಿಸಿದ್ದರು ಎಂದರು.