ಅರಣ್ಯ ಒತ್ತುವರಿ ವಿಚಾರದಲ್ಲಿ ಸುಪ್ರೀಂಗೆ ಅಫಿಡವಿಟ್: ರೈ
ಮಂಗಳೂರು: ಅರಣ್ಯ ಪ್ರದೇಶ ಒತ್ತುವರಿ ಮಾಡಿ ವಾಸವಿರುವವರನ್ನು ಒಕ್ಕಲೆಬ್ಬಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಹಿನ್ನಲೆಯಲ್ಲಿ ಜೂ.11ರಂದು ಬೆಂಗಳೂರಲ್ಲಿ ಅರಣ್ಯ ಪ್ರದೇಶ ವ್ಯಾಪ್ತಿಯ ಶಾಸಕರ ಸಭೆ ಕರೆದು ಅಫಿಡವಿಟ್ ಸಲ್ಲಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಸಚಿವ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆದ ರಮಾನಾಥ ರೈ ಸುಳಿವು ನೀಡಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶ ಇರುವುದರಿಂದ ಹೆಚ್ಚೇನೂ ಹೇಳಲಾರೆ. ಆದರೆ ಶಾಸಕರ ಸಭೆಯಲ್ಲಿ ಅರಣ್ಯ ಸಂರಕ್ಷಣೆ ಕಾಯ್ದೆ ಜತೆ ಅರಣ್ಯದಲ್ಲಿ ವಾಸಿಸುತ್ತಿರುವವರ ಹಿತಾಸಕ್ತಿ ಕಾಪಾಡುವ ಬಗ್ಗೆಯೂ ಚರ್ಚೆ ನಡೆಸಲಾಗುವುದು. ಜೂ.11ರಂದು ಸಂಜೆ 4ಕ್ಕೆ ಸಭೆ ನಡೆಯಲಿದ್ದು, ಸಭೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಅಫಿಡ್‌ವಿಟ್ ಸಲ್ಲಿಕೆ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದರು.
ಮುಗಿದ ಅಧ್ಯಾಯ: ವಿಧಾನಸೌಧದಲ್ಲಿ ತನ್ನ ಕಚೇರಿ ಗೋಡೆಯನ್ನು ಒಡೆದ ವಿಚಾರ ತನಗೆ ಗೊತ್ತಿಲ್ಲ. ಅದು ಮುಗಿದ ವಿಚಾರ, ಮತ್ತೆ ಕೆದಕಬೇಡಿ ಎಂದು ಮಾಧ್ಯಮದವರನ್ನು ವಿನಂತಿಸಿದ ಸಚಿವ ರಮಾನಾಥ ರೈ, ಡಿಪಿಆರ್‌ವರಿಗೆ ತಾನೇನು ಸೂಚನೆ ನೀಡಿಲ್ಲ, ತನಗೆ ವಾಸ್ತುವಲ್ಲಿ ನಂಬಿಕೆ ಇಲ್ಲ. ತನ್ನ ಜತೆ ಸಿಎಂ ಈ ಬಗ್ಗೆ ಸ್ಪಷ್ಟನೆ ಕೇಳಿಲ್ಲ, ತಾನು ಈಗಾಗಲೇ ಇದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಿದ್ದೇನೆ ಎಂದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ಆಯ್ಕೆ ಮಾಡುವ ಜವಾಬ್ದಾರಿ ಪಕ್ಷಕ್ಕೆ ಸೇರಿದ್ದು ಎಂದರು.