ಅಪಘಾತ: ಕ್ರೀಡಾಪಟು ಸಾವು
ಕ.ಪ್ರ.ವಾರ್ತೆ ಮಂಗಳೂರು ಜೂ. 9
ವಾಮಂಜೂರು ಸೇಂಟ್ ಜೋಸೆಫ್ ಕಾಲೇಜು ವಿದ್ಯಾರ್ಥಿ, ಕ್ರೀಡಾಪಟು ಇತಿಹಾಸ್ ಶೆಟ್ಟಿ (21) ಕದ್ರಿ ಬಳಿ ಶನಿವಾರ ತಡರಾತ್ರಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಅವರ ತಾಯಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತಿಹಾಸ್ ಶೆಟ್ಟಿ ಶನಿವಾರ ತಮ್ಮ ಗೆಳೆಯರ ಪಾರ್ಟಿಯಲ್ಲಿ ತಾಯಿಯೊಂದಿಗೆ ಭಾಗವಹಿಸಿ ಮಧ್ಯರಾತ್ರಿ ಕಳೆದು ಮನೆಗೆ ತೆರಳುತ್ತಿದ್ದಾಗ ಕದ್ರಿ ಬಾಲಭವನ ಬಳಿ ಕಂಪೌಂಡ್ ಗೋಡೆಗೆ ಕಾರು ಡಿಕ್ಕಿ ಹೊಡೆಯಿತು. ಕಂಪೌಂಡ್ ಭೇದಿಸಿ ಕಾರು ಅರ್ಧ ಒಳಪ್ರವೇಶಿಸಿದೆ. ಕಾರಿನಲ್ಲಿದ್ದ ಗೆಳೆಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾತ್ರಿ ಇಡೀ ಜೋರಾಗಿ ಮಳೆ ಸುರಿಯುತ್ತಿದ್ದದ್ದೂ ಅಪಘಾತಕ್ಕೆ ಕಾರಣವಾಗಿದೆ. ಇತಿಹಾಸ್ ಶೆಟ್ಟಿ ಟೇಬಲ್ ಟೆನ್ನಿಸ್ ಮತ್ತು ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಅನೇಕ ಬಾರಿ ಕಾಲೇಜನ್ನು ಪ್ರತಿನಿಧಿಸಿದ್ದರು.