ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಕ್ಷರ ದಾಸೋಹ ಅಕ್ಕಿ ಚೀಲ ತೂಕದಲ್ಲಿ ವಂಚನೆ!

Vishwanath S
Updated On : 11 Jun 2013, 11:36 am

ಪುತ್ತೂರು: ಸರ್ಕಾರ ಎಲ್ಲ ಮಕ್ಕಳಿಗೂ ಅಕ್ಷರ ದಾಸೋಹದ ಮೂಲಕ ಬಿಸಿಯೂಟ ನೀಡುತ್ತಿದೆ. ಆದರೆ ಈ ಮಕ್ಕಳಿಗೆ ನೀಡುವ ಆಹಾರವನ್ನೂ ಎಳೆದು ತಿನ್ನುವ ಧೂರ್ತರಿದ್ದಾರೆ.
ಇದಕ್ಕೊಂದು ನಿದರ್ಶನ ಪುತ್ತೂರು ನಗರದ ಶಾಲೆಯೊಂದರಲ್ಲಿ ಸೋಮವಾರ ಬೆಳಕಿಗೆ ಬಂದಿದೆ.
ಶಾಲೆಗೆ ಸರಬರಾಜಾದ ಬಿಸಿಯೂಟ ಅಕ್ಕಿಯ ಪ್ರತಿ ಮೂಟೆಯಲ್ಲೂ ಸುಮಾರು 2-4 ಕೆ.ಜಿ. ಕಡಿಮೆ ಅಕ್ಕಿ ತುಂಬಿಸಿ ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ. ಈ ವಂಚನೆ ಹಿಂದೆ ದೊಡ್ಡ ಮಟ್ಟದ ಜಾಲ ಇರುವ ಶಂಕೆ ವ್ಯಕ್ತವಾಗಿದೆ.
ಘಟನೆ ವಿವರ: ಪುತ್ತೂರು ನಗರದ ಕೃಷ್ಣನಗರ ಶಾಲೆಗೆ ಬಿಸಿಯೂಟಕ್ಕಾಗಿ 4 ಮೂಟೆ ಅಕ್ಕಿ ಸರಬರಾಜು ಮಾಡಲಾಗಿತ್ತು. ಈ ಅಕ್ಕಿ ಕೆಳಗಿಳಿಸುವ ಸಂದರ್ಭ ಸ್ಥಳೀಯ ಪುರಸಭಾ ಸದಸ್ಯ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ ಸ್ಥಳದಲ್ಲಿದ್ದರು. ಅವರಿಗೆ ಈ ಬಗ್ಗೆ ಸಂಶಯ ಬಂದ ಹಿನ್ನೆಲೆಯಲ್ಲಿ ಅಕ್ಕಿಯನ್ನು ತೂಕ ಮಾಡುವಂತೆ ಶಿಕ್ಷಕರಿಗೆ ಸೂಚನೆ ನೀಡಿದರು. ಆದರೆ ಶಾಲೆಯಲ್ಲಿ ಅಕ್ಕಿ ತೂಕ ಮಾಡುವ ಯಂತ್ರವಿಲ್ಲದ ಕಾರಣ ಪಕ್ಕದ ಅಂಗಡಿಯೊಂದರಿಂದ ತೂಕದ ಯಂತ್ರ ತಂದು ತೂಕ ಮಾಡಲಾಯಿತು.
ಆ ವೇಳೆ ಒಂದು ಗೋಣಿಯಲ್ಲಿ ಎರಡೂವರೆ ಕೆಜಿ, ಇನ್ನೊಂದು ಗೋಣಿಯಲ್ಲಿ ಮೂರು ಕೆಜಿ, ಮತ್ತೊಂದು ಗೋಣಿಯಲ್ಲಿ ಮೂರುವರೆ ಕೆಜಿ ಕಡಿಮೆ ಅಕ್ಕಿಯಿದ್ದು, ಹೀಗೆ ನಾಲ್ಕು ಗೋಣಿಗಳಲ್ಲಿಯೂ ತೂಕದಲ್ಲಿ ಕಡಿಮೆಯಾಗಿರುವು ದು ಕಂಡುಬಂತು. ಬಳಿಕ ಇದನ್ನು ಸ್ಪಷ್ಟಪಡಿಸಿಕೊಳ್ಳಲು ಮತ್ತೊಂದು ತೂಕದ ಯಂತ್ರ ತರಿಸಿ ತೂಕ ಮಾಡಲಾಯಿತು. ಈ ಯಂತ್ರದಲ್ಲಿಯೂ ಅಕ್ಕಿ ಕಡಿಮೆ ಇರುವುದು ದಾಖಲಾಯಿತು.
ಈ ಸಂದರ್ಭ ಎಸ್‌ಡಿಎಂಸಿ ಅಧ್ಯಕ್ಷೆ ಚಂದ್ರಾವತಿ, ಮಾನವ ಹಕ್ಕು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಅಧ್ಯಕ್ಷ ತಾಹಿರ್ ಸಾಲ್ಮರ ಹಾಗೂ ಪದಾಧಿಕಾರಿಗಳು ಸ್ಥಳಕ್ಕಾಗಮಿಸಿದ್ದರು.
ಕೆಎಫ್‌ಸಿ ಸರಬರಾಜು: ರಾಜ್ಯಾದ್ಯಂತ ಎಲ್ಲ ಶಾಲೆಗಳಿಗೆ ಬಿಸಿಯೂಟದ ಅಕ್ಕಿಯನ್ನು ಕರ್ನಾಟಕ ಫುಡ್ ಕಾರ್ಪೊರೇಶನ್ (ಕೆಎಫ್‌ಸಿ) ಸರಬರಾಜು ಮಾಡುತ್ತಿದೆ ಎಂದು ತಿಳಿದು ಬಂದಿದ್ದು, ಕೆಎಫ್‌ಸಿಯಿಂದ ಪುತ್ತೂರಿಗೆ ಬಿಡುಗಡೆಯಾದ ಅಕ್ಕಿಯನ್ನು ಪುತ್ತೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಗೋದಾಮಿನಲ್ಲಿ ದಾಸ್ತಾನು ಇರಿಸಲಾಗುತ್ತಿದೆ. ಅಲ್ಲಿಂದ ಟ್ರಾನ್ಸ್‌ಪೋರ್ಟ್ ಸಂಸ್ಥೆಯೊಂದು ತಾಲೂಕಿನ ಎಲ್ಲ ಶಾಲೆಗಳಿಗೆ ಸರಬರಾಜು ಮಾಡುತ್ತಿದೆ ಎಂದು ತಿಳಿದುಬಂದಿದೆ. ಅಕ್ಕಿ ಮೂಟೆಗೆ ಯಾವುದೇ ಹಾನಿಯಾಗದಂತೆ ಮೂಟೆಯೊಳಗೆ ಯಾವುದೋ ವಸ್ತುವನ್ನು ತುರುಕಿ ಅಕ್ಕಿ ತೆಗೆಯಲಾಗುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಪುತ್ತೂರು ತಾಲೂಕಿನಲ್ಲಿ 246 ಶಾಲೆಗಳಿದ್ದು, ಈ ಎಲ್ಲ ಶಾಲೆಗಳಿಗೆ ತಿಂಗಳಿಗೆ 1086 ಕ್ವಿಂಟಾಲ್ ಅಕ್ಕಿ ಸರಬರಾಜು ಮಾಡಲಾಗುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಶಾಲೆಗಳಿಗೆ ಸರಬರಾಜು ಮಾಡುವ ಅಕ್ಕಿಯಲ್ಲಿ ವಂಚನೆ ನಡೆದಿದ್ದು, ಇದರ ಹಿಂದೆ ಬೃಹತ್ ಜಾಲ ಇರುವುದಾಗಿ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.
ತನಿಖೆಗೆ ಆಗ್ರಹ: ಬಿಸಿಯೂಟದ ಅಕ್ಕಿ ಸರಬರಾಜಿನಲ್ಲಿ ರಾಜ್ಯ ಮಟ್ಟದಲ್ಲಿಯೇ ಅವ್ಯವಹಾರ ನಡೆದಿರುವ ಶಂಕೆಯಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ರಾಜ್ಯ ಮಟ್ಟದಲ್ಲಿ ಗುತ್ತಿಗೆ ಪಡೆದವರು ಅಕ್ಕಿಯ ತೂಕ ವ್ಯತ್ಯಾಸ ಮಾಡಿ ವಂಚನೆ ನಡೆಸುತ್ತಿರುವ ಸಂಭವವಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಸಂಬಂಧಿಸಿದ ಅಧಿಕಾರಿಗಳು ತನಿಖೆ ನಡೆಸಿ ಈ ವಂಚನಾ ಜಾಲ ಭೇದಿಸಬೇಕು ಪುರಸಭಾ ಸದಸ್ಯ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement