ಕಾಶಿಶ್ರೀ ಸನ್ಯಾಸ ದೀಕ್ಷೆ 70ನೇ ವರ್ಷಾಚರಣೆ
ಮಂಗಳೂರು: ಕಾಶಿ ಸಂಸ್ಥಾನ ಮಠಾಧೀಶ ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿ ಸನ್ಯಾಸಿ ಧೀಕ್ಷೆ ಪಡೆದು 70 ವರ್ಷ ಆಚರಣೆ ಸೋಮವಾರ ರಥಬೀದಿ ಶ್ರೀವೆಂಕಟರಮಣ ದೇವಸ್ಥಾನ ರಾಜಾಂಗಣದಲ್ಲಿ ವಿಜೃಂಬಣೆಯಿಂದ ನಡೆಯಿತು.
ಮಠದಲ್ಲಿ ಲಘುವಿಷ್ಣುಯಾಗ, ವ್ಯಾಸರಘುಪತಿದೇವರ ಮಹಾಪೂಜೆ ನಡೆಯಿತು.
ಸಂಜೆ ಶಿಷ್ಯ ಶ್ರೀ ಮದ್ ಸಂಯಮೀಂದ್ರತೀರ್ಥ ಸ್ವಾಮೀಜಿ ಆಗಮಿಸಿದರು. ಸಂಸ್ಥಾನಕ್ಕೆ ಸಂಬಂಧಿಸಿ ಮಂಗಳೂರು, ಬಸ್ರೂರು, ಕಾರ್ಕಳ ಪಾಠಶಾಲೆ ಹಾಗೂ ಬಾಲಕಾಶ್ರಮಗಳ ವಾರ್ಷಿಕೋತ್ಸವ ನಡೆಯಿತು. ದೇಗುಲ ಮೊಕ್ತೇಸರ ಸಿ.ಎಲ್.ಶೆಣೈ, ನಿತ್ಯಾನಂದ ನಾಯಕ್, ಜೀಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಪದ್ಮನಾಭ ರೈ ಇದ್ದರು.
ಜಿಲ್ಲಾ ಬಿಜೆಪಿ ಮೋದಿಗೆ 'ನಮೋ'
ಮಂಗಳೂರು: ಬಿಜೆಪಿ ನಾಯಕ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಲೋಕಸಭಾ ಚುನಾವಣೆಯ ರಾಷ್ಟ್ರೀಯ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಗೋವಾದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಆಯ್ಕೆ ಮಾಡಿರುವುದಕ್ಕೆ ದ.ಕ.ಜಿಲ್ಲಾ ಬಿಜೆಪಿ ಹರ್ಷ ವ್ಯಕ್ತಪಡಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಈ ಘೋಷಣೆ ಮಾಡಿದ್ದು ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಯಶಸ್ಸುಗಳಿಸಲಿದೆ ಎಂದು ರಾಜ್ಯ ಉಪಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ವಿಧಾನ ಪರಿಷತ್ತು ಸದಸ್ಯ ಗಣೇಶ್ ಕಾರ್ಣಿಕ್ ಮತ್ತು ಮೋನಪ್ಪ ಭಂಡಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂಸತ್ ನಿಧಿ ರು. 2.25 ಲಕ್ಷ ಬಿಡುಗಡೆ
ಮಂಗಳೂರು: ಸಂಸತ್ ಸದಸ್ಯರ ಸ್ಥಳೀಯಾಭಿವೃದ್ಧಿ ಯೋಜನೆಯಡಿ ಸಂಸದ ಜಸ್ಟೀಸ್ ಡಾ. ರಾಮಾ ಜೋಯಿಸ್ 2012-13ನೇ ಸಾಲಿನ ಪ್ರಥಮ ಕಂತಿನ ಅನುದಾನದಲ್ಲಿ ಮಂಗಳೂರು ಮತ್ತು ಮೂಡುಬಿದಿರೆಯ ಕಾಮಗಾರಿಗೆ ರು. 2.25 ಲಕ್ಷ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ ತಿಳಿಸಿದ್ದಾರೆ.
ಜು.3ರಿಂದ ಭೂಸೇನೆಗೆ ಆಯ್ಕೆ ರ್ಯಾಲಿ
ಮಂಗಳೂರು: ಚಿಕ್ಕಮಗಳೂರು ಜ್ಯೋತಿನಗರದ ಸೆಂಟನರಿ ಸ್ಟೇಡಿಯಂನಲ್ಲಿ ಜು. 3ರಿಂದ 10ರವರೆಗೆ ಭೂಸೇನೆ ಆಯ್ಕೆ ರ್ಯಾಲಿ ನಡೆಯಲಿದೆ. ಭೂಸೈನ್ಯದ ಸಿಪಾಯಿ ಜೆಡಿ, ಸಿಪಾಯಿ ಟೆಕ್ನಿಕಲ್, ಸಿಪಾಯಿ ಗುಮಾಸ್ತ, ಸಿಪಾಯಿ ಟ್ರೇಡ್ಸ್‌ಮೆನ್, ಸಿಪಾಯಿ ಕ್ಲಾರ್ಕ್, ಸಿಪಾಯಿ ನರ್ಸಿಂಗ್ ಹಾಗೂ ಸಹಾಯಕ ಹುದ್ದೆಗೆ ಆಯ್ಕೆ ನಡೆಯಲಿದೆ. ರ್ಯಾಲಿಯಲ್ಲಿ ಉತ್ತರ ಕನ್ನಡ, ದ.ಕ., ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಹಾಸನ, ಕೊಡಗು, ಉಡುಪಿ, ಬಿಜಾಪುರ, ಧಾರವಾಡ ಜಿಲ್ಲೆಯ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. 21 ವರ್ಷಕ್ಕಿಂತ ಕಡಿಮೆ ವಯೋವುತಿ ಹೊಂದಿರುವ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ ಪಾಸಾಗಿರುವ ಅವಿವಾಹಿತ ಪುರುಷರು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮಂಗಳೂರು ನೇಮಕಾರಿ ಕಚೇರಿ 0824-2458376 ಸಂಪರ್ಕಿಸಬಹುದು.
ವಿದ್ಯಾರ್ಥಿ ವೇತನ:ಅರ್ಜಿ ಆಹ್ವಾನ
ಮಂಗಳೂರು: ರಾಜ್ಯ ದೇವಾಡಿಗರ ಸಂಘ ವತಿಯಿಂದ 2013ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ದೇವಾಡಿಗ ಸಮಾಜ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿಭಾನ್ವಿತ ಹಿಂದುಳಿದ ಬಡ ವಿದ್ಯಾರ್ಥಿಗಳು ವೇತನಕ್ಕಾಗಿ ಅರ್ಜಿ ಸಲ್ಲಿಸಲು ಜೂ. 26 ಕೊನೆ ದಿನ. ಅಂಕಪಟ್ಟಿ, ಜಾತಿ, ಆದಾಯ ಪ್ರಮಾಣ ಪತ್ರ ಹಾಗೂ ದೇವಾಡಿಗ ಸಮಾಜದ ಮುಖ್ಯಸ್ಥರ ಸಹಿಯೊಂದಿಗೆ ಅರ್ಜಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ 0824-2451096 ಸಂಪರ್ಕಿಸಬಹುದು.
ಅರ್ಜಿ ಆಹ್ವಾನ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಸಂಶೋಧನ ಕೇಂದ್ರದಲ್ಲಿ ಸಂಶೋಧನ ಸಹಾಯಕರಾಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಾಲಬದ್ಧ ಸಂಶೋಧನಾ ಯೋಜನೆಗಳಲ್ಲಿ ಕಾರ್ಯನಿರ್ವಹಿಸುವುದು ಮತ್ತು ಪ್ರಕಟಣೆ, ಪ್ರಸರಣ ಇವುಗಳ ಸಂಪಾದನೆ, ಸಂಘಟನಾತ್ಮಕ ಕೆಲಸಗಳನ್ನು ನಿರ್ವಹಿಸುವುದು ಹುದ್ದೆಯ ಪ್ರಧಾನ ಕರ್ತವ್ಯ. ಸಂಶೋಧನ ಅನುಭವವಿರುವ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ.
ಅರ್ಹತೆಗಳು: ಕನ್ನಡ, ಇಂಗ್ಲಿಷ್, ಹಿಂದಿ, ಇತಿಹಾಸ, ರಾಜಕೀಯಶಾಸ್ತ್ರ, ಸಮಾಜಶಾಸ್ತ್ರ, ಸಮಾಜಕಾರ್ಯ ಹಾಗೂ ಪತ್ರಿಕೋದ್ಯಮ ಮತ್ತು ಸಂವಹನ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಶೇ. 55 ಅಂಕ ಗಳಿಸಿರಬೇಕು. ಡಾಕ್ಟರೇಟ್ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜೂ. 30 ಕೊನೆ ದಿನ. ಸಂಯೋಜಕರು ಕನಕದಾಸ ಸಂಶೋಧನ ಕೇಂದ್ರ, ಮಂಗಳೂರು ವಿಶ್ವವಿದ್ಯಾಲಯ ಮಂಗಳಗಂಗೋತ್ರಿ 574199 ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.