ಕುಡಿಯುವ ನೀರಿನ ಸಮಸ್ಯೆ: ಕಳಿಯ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ
ಬೆಳ್ತಂಗಡಿ: ಕುಡಿಯುವ ನೀರಿನ ಸಮಸ್ಯೆಯ ನಿರ್ಲಕ್ಷ್ಯದ ವಿರುದ್ಧ ಕಳಿಯ ಗ್ರಾಮ ಪಂಚಾಯಿತಿ ವಿರುದ್ಧ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಪಂಚಾಯ್ತಿಗೆ ಬೀಗ ಜಡಿದ ವಿದ್ಯಮಾನ ಕಳಿಯ ಎಂಬಲ್ಲಿ ಸೋಮವಾರ ನಡೆದಿದೆ.
ಕಳಿಯ ಗ್ರಾಮದ ಪದಗೋಳಿ, ಬಟ್ಟೆಮಾರು, ಸುಣ್ಣಲ್ದಡ್ಡ ಪ್ರದೇಶದ ಸುಮಾರು 175 ಕುಟುಂಬಗಳ 543 ಫಲಾನುಭವಿಗಳು ಕಳೆದ 6 ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರು. ಈ ಬಗ್ಗೆ ಅದೆಷ್ಟೋ ಬಾರಿ ಫಲಾನುಭವಿಗಳು ಪಂಚಾಯ್ತಿಗೆ ಸಮಸ್ಯೆಯನ್ನು ವಿವರಿಸಿ ಬಗೆಹರಿಸುವಂತೆ ಆಗ್ರಹಿಸಿದ್ದರು. ಆದರೆ ಗ್ರಾ.ಪಂ. ಆಡಳಿತ ಈ ಬಗ್ಗೆ ಸ್ಪಂದನೆ ತೋರಿಸದೆ ಪ್ರತಿಸಲ ದೂರು ನೀಡಲು ಬಂದವರನ್ನು ನಾನಾ ಕಾರಣಗಳಿಂದ ಸಾಗಹಾಕುತ್ತಿದ್ದರು. ಇದು ನಾಗರಿಕರನ್ನು ಕೆರಳಿಸಿತ್ತು.
ತೀವ್ರ ಅಸಮಾಧಾನಗೊಂಡ ನೂರಾರು ಫಲಾನುಭವಿಗಳು ಸೋಮವಾರ ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿದ್ದ ಗ್ರಾಮ ಪಂಚಾಯ್ತಿ ಅಭಿವೃದ್ಧಿಅಧಿಕಾರಿ ಮತ್ತು ಪಂಚಾಯ್ತಿ ಅಧ್ಯಕ್ಷರು ಸಮಜಾಯಿಶಿ ನೀಡಿದರೂ ಪ್ರತಿಭಟನಾಕಾರರು ಸಮಾಧಾನಗೊಳ್ಳದೆ ಪಂಚಾಯ್ತಿಗೆ ಬೀಗ ಜಡಿದರಲ್ಲದೆ ತೀವ್ರ ತರಾಟೆಗೆ ತೆಗೆದುಕೊಂಡರು. ಮಂಗಳವಾರ ಸೂರ್ಯೋದಯಕ್ಕೆ ಮೊದಲು ಕುಡಿಯುವ ನೀರು ಒದಗಿಸದಿದ್ದರೆ ಫಲಾನುಭವಿಗಳಿಂದ ವಸೂಲು ಮಾಡಿದ ಶುಲ್ಕವನ್ನು ವಾಪಸ್ ಮಾಡುವಂತೆ ಪಟ್ಟುಹಿಡಿದರು.
ಕೆಲ ಸಮಯದ ಹಿಂದಷ್ಟೆ ಕೊಳವೆ ಬಾವಿ ತೋಡಿದ್ದು, ಅದು ನಿಷ್ಪ್ರಯೋಜಕವಾಗಿದೆ. ಮತ್ತೊಂದು ಕೊಳವೆ ಬಾವಿ ತೋಡಲು ಸ್ಥಳ ಗೊತ್ತುಮಾಡಿ ಒಂದು ವಾರವಾಗಿದೆ. ಕುಡಿಯುವ ನೀರಿಗಾಗಿ ರು. 13 ಲಕ್ಷಗಳ ಯೋಜನೆ ಸಿದ್ಧವಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿ ಇದೆ ಎಂದು ಪಿಡಿಒ ಹೇಳಿದರು.