ತೋಡಿಗೆ ಬಿದ್ದು ಮಹಿಳೆ ಸಾವು
ಮಂಗಳೂರು: ತೋಡು ದಾಟುತ್ತಿದ್ದ ಸಂದರ್ಭ ಮಹಿಳೆಯೋರ್ವಳು ಜಾರಿ ಬಿದ್ದು ನೆರೆ ನೀರಿನಲ್ಲಿ ಸೋಮವಾರ ಕೊಚ್ಚಿಹೋಗಿದ್ದಾರೆ.
ಅತ್ತಾವರ ಪುಣಿ ಬಳಿ ಘಟನೆ ನಡೆದಿದ್ದು, ವಿಮಲ(50) ಮೃತ ದುರ್ದೈವಿ. ಇವರು ತಮ್ಮ ಮನೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದ್ದು, ನೇತ್ರಾವತಿ ನದಿ ಸೇರುವ ಧಕ್ಕೆ ಬಳಿ ಮೃತ ದೇಹ ಪತ್ತೆಯಾಗಿದೆ. ಗಂಡನನ್ನು ಕಳೆದುಕೊಂಡೋರುವ ವಿಮಲ ಮಕ್ಕಳಿಲ್ಲದೆ ಒಬ್ಬಂಟಿಯಾಗಿದ್ದರು. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಿಮೆಯಾದ ಅಬ್ಬರ: ನಗರದಲ್ಲಿ ಮಳೆ ಅಬ್ಬರ ಸೋಮವಾರ ಕಡಿಮೆಯಾಗಿತ್ತು. ಆಗಾಗ ಧೋ ಎಂದು ಸುರಿಯುತ್ತಿದ್ದರೆ, ಸಂಜೆ ವೇಳೆ ಗಾಳಿ, ಮಳೆ ಜೋರಾಗಿತ್ತು. ಕಳೆದ ವರ್ಷ ಜನವರಿಯಿಂದ ಜೂನ್‌ವರೆಗೆ ಮಂಗಳೂರಿನಲ್ಲಿ 196.0 ಮಿ.ಮೀ., ಮಳೆ ಸುರಿದಿದ್ದರೆ, ಈ ವರ್ಷ 589.8 ಮಿ.ಮೀ., ಅಧಿಕ ಮಳೆ ದಾಖಲಾಗಿದೆ.
ಜಿಲ್ಲೆಯಲ್ಲಿ 2012 ಜೂನ್‌ವರೆಗೆ ಒಟ್ಟು 165.4 ಮಿ.ಮೀ ಮಳೆ ಸುರಿದಿದ್ದರೆ, ಈ ಬಾರಿ ಇದೇ ತಿಂಗಳು 444.9 ಮಳೆ ಸುರಿದಿದೆ. ಸೋಮವಾರ ಬೆಳಗ್ಗಿನವರೆಗೆ ಜಿಲ್ಲೆಯ ಮೂಡುಬಿದಿರೆಯಲ್ಲಿ 32.2 ಮಿ.ಮೀ., ಬೆಳ್ತಂಗಡಿಯಲ್ಲಿ 29.6 ಮಿ.ಮೀ. ಹಾಗೂ ಮಂಗಳೂರಿನಲ್ಲಿ 29.3 ಮಿ.ಮೀ. ಅತಿ ಹೆಚ್ಚು ಮಳೆ ಸುರಿದಿದೆ.
ಹೂತು ಹೋದ ಹಿಟಾಚಿ: ಬಂಗ್ರಕೂಳೂರು ರಸ್ತೆ ಬದಿಯ ಚರಂಡಿಯ ಹೂಳು ತೆಗೆಯುತ್ತಿದ್ದ ಹಿಟಾಚಿ ಜೋರಾದ ಮಳೆಗೆ ಕೆಸರಿನಲ್ಲಿ ಹೂತುಹೋಗಿತ್ತು. ಸುಮಾರು ಒಂದು ಗಂಟೆ ಸತತ ಪ್ರಯತ್ನದಿಂದ ಕ್ರೇನ್ ಮೂಲಕ ಹಿಟಾಚಿ ಮೇಲಕ್ಕೆತ್ತಲಾಯಿತು.
ಗಾಳಿಗೆ ಹೆಂಚು ಹಾರಿ ಹಾನಿ: ಬಜಾಲ್ ಜಯನಗರದ ಭಾಸ್ಕರ್ ಅವರ ಮನೆ ಹೆಂಚು ಸೋಮವಾರ ಮುಂಜಾನೆ ಗಾಳಿಗೆ ಹಾರಿ ಹೋಗಿ ರು. 5 ಸಾವಿರ ಹಾನಿ ಸಂಭವಿಸಿದೆ. ಸೋಮೇಶ್ವರ ನಿವಾಸಿ ದಾಮೋದರ ಮನೆ ಹೆಂಚು ಹಾರಿ ಹೋಗಿದ್ದು ರು. 3.500 ನಷ್ಟ ಹಾಗೂ ಮೂಲ್ಕಿ ಹೋಬಳಿಯ ಬಾಯಾಡಿ ಮೀನಾಕ್ಷಿ ಎಂಬವರ ಮನೆಯ ಹೆಂಚು ಹಾರಿ ಮನೆಗೆ ಹಾನಿಯಾಗಿದ್ದು ಸುಮಾರು ರು. 25 ಸಾವಿರ ನಷ್ಟವಾಗಿದೆ. ಕಾಟಿಪಳ್ಳದಲ್ಲೂ ಮನೆಗೆ ಹಾನಿ ಸಂಭವಿಸಿದೆ.
ಮಳೆ ವಿವರ: ಬಂಟ್ವಾಳ- 20.4 ಮಿ.ಮೀ., ಪುತ್ತೂರು- 12.2 ಮಿ.ಮೀ., ಕಡಬ- 9.2 ಮಿ.ಮೀ., ಸುಳ್ಯ- 8.0 ಮಿ.ಮೀ. ಮಳೆ ದಾಖಲಾಗಿದೆ.
ಮಾಣಿ: ಸಂತೆ ಮಾರುಕಟ್ಟೆಗೆ ಬೃಹತ್
ಮಾವಿನ ಮರ ಬಿದ್ದು ಅಪಾರ ಹಾನಿ
ವಿಟ್ಲ: ಮಾಣಿಯಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಗಾಳಿಗೆ 100ಕ್ಕೂ ಅಧಿಕ ವರ್ಷ ಪ್ರಾಯದ ಮಾವಿನ ಬೃಹತ್ ಮರವೊಂದು ಸಂತೆ ಮಾರುಕಟ್ಟೆಯ ಕಟ್ಟಡ ಹಾಗೂ ನಾಲ್ಕು ಅಂಗಡಿಗಳ ಛಾವಣಿಗಳ ಮೇಲೆ ಬಿದ್ದ ಪರಿಣಾಮ ಲಕ್ಷಾಂತರ ರು. ನಷ್ಟ ಸಂಭವಿಸಿದೆ.
ಮಾಣಿ ಸಂತೆ ಕಟ್ಟಡದ ಪಕ್ಕದಲ್ಲೇ ಇದ್ದ ಅನೇಕ ಅಂಗಡಿಗಳ ಛಾವಣಿ ಕೂಡಾ ಕುಸಿದುಬಿದ್ದಿದ್ದು, ಒಟ್ಟು ಸುಮಾರು ರು. 6- 7 ಲಕ್ಷ ನಷ್ಟ ಅಂದಾಜಿಸಲಾಗಿದೆ.
ಮರ ಅರ್ಧ ಭಾಗದಿಂದ ಮುರಿದಿದ್ದು, ಇಬ್ಭಾಗವಾಗಿ ಒಂದು ಗೆಲ್ಲು ಎಡಭಾಗಕ್ಕೆ ಮತ್ತೊಂದು ಭಾಗ ಬಲಭಾಗಕ್ಕೆ ಬಿದ್ದಿದೆ. ಸಾರ್ವಜನಿರು ಮರ ತೆರವುಗೊಳಿಸಲು ಹರಸಾಹಸಪಟ್ಟರು.
ಒಂದು ಕಟ್ಟಡಕ್ಕೆ ಹಾನಿ: ಸಂತೆಗೆ ಸಂಬಂಧಪಟ್ಟಂತೆ ಎರಡು ಕಟ್ಟಡಗಳಿದ್ದು, ಒಂದು ಕಟ್ಟಡಕ್ಕೆ ಹೆಚ್ಚಿನ ಹಾನಿಯಾಗಿದೆ. 2006ರಲ್ಲಿ ಉದ್ಘಾಟನೆಗೊಂಡ ಈ ಕಟ್ಟಡದ ಕಬ್ಬಿಣದ ಸರಳುಗಳು ಕೂಡಾ ಬೆಂಡಾಗಿವೆ. ಛಾವಣಿಯ ಕಾಲು ಭಾಗದ ಶೀಟ್‌ಗಳು ಚೂರು ಚೂರಾಗಿವೆ. ಮೂರು ವಿದ್ಯುತ್ ಕಂಬಗಳೂ ಮುರಿದು ಬಿದ್ದಿವೆ. ತಂತಿಗಳು ತುಂಡಾಗಿವೆ. ರಾತ್ರಿಯೇ ಮೆಸ್ಕಾಂ ಸಿಬ್ಬಂದಿ ಆಗಮಿಸಿ, ವಿದ್ಯುತ್ ಕಡಿತಗೊಳಿಸಿ, ತಾತ್ಕಾಲಿಕವಾಗಿ ಅಪಾಯ ತಪ್ಪಿಸಿದ್ದಾರೆ.
ಸುತ್ತಮುತ್ತಲ ಕಟ್ಲೇರಿ ಅಂಗಡಿಗಳ ಮಾಲೀಕರಾದ ವೆಂಕಟೇಶ್, ದಿನೇಶ್, ಸಂಕಪ್ಪ ಪೂಜಾರಿ, ಭಾರತೀ ಸಫಲ್ದಿ ಅವರ ಅಂಗಡಿಗಳ ಛಾವಣಿಗಳು ಮುರಿದುಬಿದ್ದಿವೆ. ಸಾವಿರಾರು ರು. ನಷ್ಟ ಸಂಭವಿಸಿದೆ. ಮಳೆ ನೀರಿನಿಂದ ಸಾಮಗ್ರಿಗಳು ನಾಶವಾಗಿವೆ.
ಕೆಲ ವರ್ಷಗಳ ಹಿಂದೆ ಇಲ್ಲಿ ಮತ್ತೊಂದು ಮರವೂ ಬಿದ್ದಿತ್ತು. ಆಗ ವಿಶೇಷ ಹಾನಿಯುಂಟಾಗಿರಲಿಲ್ಲ ಎನ್ನುತ್ತಾರೆ ಸ್ಥಳೀಯರು. ರಾತ್ರಿ ಘಟನೆ ನಡೆದುದರಿಂದ ಹೆಚ್ಚಿನ ಅಪಾಯವಾಗಿಲ್ಲ.
ಇನ್ನಷ್ಟು ಮರಗಳಿವೆ: ಈ ಕಟ್ಟಡಗಳ ಸುತ್ತಲೂ ಇನ್ನೂ ಅನೇಕ ಹಳೆಯ ಅಂದರೆ 50- 100ಕ್ಕೂ ಅಧಿಕ ವರ್ಷಗಳನ್ನು ಕಂಡ ಮರಗಳಿವೆ. ಅವುಗಳನ್ನು ಕಡಿಯದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಹಾನಿ ಸಂಭವಿಸುವ ಸಾಧ್ಯತೆಯಿದೆ. ಮಾಣಿ ಪ್ರದೇಶದಲ್ಲಿ ಮಂಗಳೂರು- ಬೆಂಗಳೂರು ಅಂತಾರಾಷ್ಟ್ರೀಯ ಹೆದ್ದಾರಿ ಹಾಗೂ ಮಾಣಿ- ಮೈಸೂರು ರಾಜ್ಯ ಹೆದ್ದಾರಿಯಿದ್ದು, ಮರ ಸಂತೆ ಮಾರುಕಟ್ಟೆ ಮೇಲೆ ಬಿದ್ದ ಪರಿಣಾಮ ಸಂಚಾರಕ್ಕೆ ಯಾವುದೇ ತೊಂದರೆ ಆಗಿಲ್ಲ.
ಕಾರ್ಕಳ ಅನಂತಶಯನ ದೇವಳ ಗೋಡೆ ಕುಸಿತ
ಉಡುಪಿ: ಜಿಲ್ಲೆಯಾದ್ಯಂತ ಸೋಮವಾರವೂ ಉತ್ತಮ ಮಳೆಯಾಗಿದ್ದು, ಕೆಲವು ಕಡೆ ಸಣ್ಣಪುಟ್ಟ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ 1 ಕಾರು ಸೇರಿದಂತೆ 6 ಮನೆಗಳು ಮತ್ತು 1 ದೇವಸ್ಥಾನಕ್ಕೆ ಭಾಗಶಃ ನಷ್ಟ ಉಂಟಾಗಿದೆ.
ಕಾರ್ಕಳದ ಅನಂತಶಯನ ದೇವಸ್ಥಾನದ ಗೋಡೆ ಕುಸಿದು ರು. 3 ಲಕ್ಷ ಹಾನಿಯಾಗಿದೆ.
ಉಡುಪಿ ತಾಲೂಕಿನ ನಂಚಾರು ಗ್ರಾಮದ ರಾಧ ಬೆಳ್ಚಡ ಎಂಬವರ ಮನೆ ಮೇಲೆ ಮರ ಬಿದ್ದು ಸುಮಾರು ರು. 10 ಸಾವಿರ ನಷ್ಟ ಉಂಟಾಗಿದೆ. ಅದೇ ರೀತಿ, ಶಿರ್ವ ಗ್ರಾಮದ ರತ್ನಾ ಎಂಬವರ ಮನೆ ಬಾಗಶಃ ಹಾನಿಯಾಗಿ ರು. 10 ಸಾವಿರ ನಷ್ಟವಾಗಿದೆ. ಕುಂದಾಪುರ ತಾಲೂಕಿನ ಮಳವಳ್ಳಿ ಜನತಾ ಕಾಲನಿಯ ಪ್ರಕಾಶ ಮೊಗೇರ ಎಂಬವರ ಮನೆಯ 50 ಹೆಂಚುಗಳು ಮತ್ತು 1 ತಗಡು ಶೀಟು ಗಾಳಿಗೆ ಹಾರಿ ಹೋಗಿ ರು. 1500 ನಷ್ಟ, ಕಾಳಾವರ ಗ್ರಾಮದ ಕಾಪೋಡ್ಲು ಎಂಬಲ್ಲಿ ಸಾವಿತ್ರಿ ಮೋಗೆರ ಮನೆಯ ಸಿಮೆಂಟಿನ ತಗಡು ಮಾಡು ಗಾಳಿಗೆ ಹಾರಿ ಹೋಗಿ ರು. 25 ಸಾವಿರನಷ್ಟವಾಗಿದೆ.
ಕಾರ್ಕಳ-ಕಾರಿಗೆ ಹಾನಿ: ಕಾರ್ಕಳದ ಅನಂತಶಯನ ದೇವಸ್ಥಾನದ ಗೋಡೆ ಕುಸಿದ ಸಂದರ್ಭ, ಕಾರಿನ ಮೇಲೆ ಈ ಗೋಡೆ ಬಿದ್ದು ರು. 1.50 ಲಕ್ಷ ನಷ್ಟ ಸಂಭವಿಸಿದೆ.
ಕಾಬೆಟ್ಟು ಎಂಬಲ್ಲಿ ಬಿಫಾತೀಮ ಎಂಬವರ ಮನೆಯ ಮೇಲೆ ಮರ ಬಿದ್ದು ಮೇಲ್ಛಾವಣಿ ಬಿರುಕು ಬಿಟ್ಟು ರು. 30 ಸಾವಿರ, 7 ವಿದ್ಯುತ್ ಕಂಬಗಳು ಬಿದ್ದು ಮೆಸ್ಕಾಂಗೆ ರು. 60 ಸಾವಿರ ನಷ್ಟ ಸಂಭವಿಸಿದೆ. ಕಲ್ಲೀಲು ಎಂಬಲ್ಲಿ ಗೋಕುಲ್‌ದಾಸ್ ಅವರ ಶೆಡ್ಡಿನ ಮಾಡಿನ 20 ಶೀಟುಗಳು ಹಾರಿಹೋಗಿ ರು. 10 ಸಾವಿರ ನಷ್ಟ ಉಂಟಾಗಿದೆ.
ಮಳೆ ಪ್ರಮಾಣ: ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ವರೆಗೆ 47.30 ಮಿ.ಮೀ. ಸರಾಸರಿ ಮಳೆಯಾಗಿದೆ. ಅದರಲ್ಲಿ ಉಡುಪಿ ತಾಲೂಕಿನಲ್ಲಿ 74.7 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 31.4 ಮಿ.ಮೀ., ಕಾರ್ಕಳ ತಾಲೂಕಿನಲ್ಲಿ 29.8 ಮಿ.ಮೀ. ಮಳೆಯಾಗಿದೆ.
ಮೂಲ್ಕಿ: ರಸ್ತೆಗೆ ಉರುಳಿದ ಮರ
ಮೂಲ್ಕಿ: ಭಾನುವಾರ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸೋಮವಾರ ಬೆಳಗ್ಗೆ ಮೂಲ್ಕಿ- ಪಂಜಿನಡ್ಕ ರಸ್ತೆ ಬದಿಯ ಬೃಹತ್ ಮರ ರಸ್ತೆಗೆ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮರವು ವಿದ್ಯುತ್ ಕಂಬದ ಮೇಲೆ ಬಿದ್ದಿದ್ದರಿಂದ ಕಂಬ ಮುರಿದಿದೆ. ಸ್ಥಳೀಯರು ಜೆಸಿಬಿ ತರಿಸಿ ಮರ ತೆರವುಗೊಳಿಸಿದರು.
ನಿರಂತರ ಮಳೆ: ತಗ್ಗು ಪ್ರದೇಶ ಜಲಾವೃತ
ಮೂಲ್ಕಿ: ಮೂಲ್ಕಿ, ಕಿನ್ನಿಗೋಳಿ, ಕಟೀಲು, ಹಳೆಯಂಗಡಿ ಪರಿಸರದಲ್ಲಿ ಭಾನುವಾರ ರಾತ್ರಿಯಿಂದ ನಿರಂತರ ಮಳೆಯಾಗಿದ್ದು, ಸೋಮವಾರ ಬೆಳಗ್ಗೆಯಿಂದ ಕೂಡ ಬಿರುಸಿನ ಮಳೆಯಾಗಿದೆ. ನಂದಿನಿ, ಶಾಂಭವಿ ನದಿ ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ, ಗದ್ದೆಗಳಲ್ಲಿ ನೀರು ತುಂಬಿದೆ.