ತಡೆಗೋಡೆ ಕುಸಿತ; ಮನೆಗೆ ಹಾನಿ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕೈಲದಲ್ಲಿ ನಿರಂತರ ಮಳೆಗೆ ತಡೆಗೋಡೆ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಮನೆಗೆ ಭಾಗಶಃ ಹಾನಿಯುಂಟಾಗಿದೆ. ಕೈಲ ಜನತಾ ಕಾಲನಿ ನಿವಾಸಿ ಜಯರಾಮ ಶೆಟ್ಟಿ ಎಂಬವರ ಮನೆಯ ಮೇಲೆ ಪಕ್ಕದ ತಡೆಗೋಡೆ ಬಿದ್ದಿದ್ದು, ಮನೆಯ ಬಚ್ಚಲು ಮನೆಯ ಗೋಡೆ ಮತ್ತು ಮೇಲೆ ಹಾಕಲಾಗಿದ್ದ ಸಿಮೆಂಟ್ ಶೀಟು ತುಂಡಾಗಿ ನೆಲಕ್ಕುರುಳಿದೆ. ತಡೆಗೋಡೆ ಕುಸಿದು ಬೀಳುತ್ತಿದ್ದಂತೆ ಬಚ್ಚಲು ಮನೆಯಲ್ಲಿ ಇದ್ದ ಜಯರಾಮ ಅವರ ಪುತ್ರಿ ಅಪಾಯದಿಂದ ಪಾರಾಗಿದ್ದಾಳೆ. ಘಟನೆಯಿಂದಾಗಿ ಸುಮಾರು ರು. 20 ಸಾವಿರಕ್ಕೂ ಅಧಿಕ ನಷ್ಟ ಉಂಟಾಗಿರುವುದಾಗಿ ಹೇಳಲಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಕೃಷ್ಣ ಗೌಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.