ವಿಟ್ಲ: ವಿವಿಧೆಡೆ ಭಾರಿ ಹಾನಿ
ವಿಟ್ಲ: ಸೋಮವಾರ ರಾತ್ರಿ ಸುರಿದ ಭಾರಿ ಮಳೆ-ಗಾಳಿಗೆ ವಿಟ್ಲ ಪರಿಸರದಾದ್ಯಂತ ಭಾರಿ ಹಾನಿ ಸಂಭವಿಸಿದೆ. ಕೊಳ್ನಾಡು ಗ್ರಾಮದ ಕರೈ- ಕಲ್ಲಡ್ಕ ರಸ್ತೆಯ ಮದಕ ಎಂಬಲ್ಲಿ ರಸ್ತೆ ಬದಿಯ ಗುಡ್ಡದಲ್ಲಿದ್ದ ಗಾಳಿ ಮರ ಹೈಟೆನ್ಶನ್ ವಿದ್ಯುತ್ ಲೈನ್ ಮೇಲೆ ಉರುಳಿ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ವ್ಯತ್ಯವಾಗಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು.
ಸಾರ್ವಜನಿಕರು ಜಾಗೃತರಾದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಲ್ಲಮಜಲು ನಿವಾಸಿ ಐಸಮ್ಮ ಎಂಬವರ ಮನೆ ಮೇಲೆ ಗೇರು ಮರ ಉರುಳಿ ಬಿದ್ದು ಭಾಗಶಃ ಹಾನಿಗೀಡಾಗಿದ್ದು, ಸ್ಥಳೀಯರು ಮತ್ತು ಸಾಲೆತ್ತೂರು ಮೆಸ್ಕಾಂ ಸಿಬ್ಬಂದಿ ತೆರವು ಕಾರ್ಯ ನಡೆಸಿದರು. ವಿಟ್ಲ- ಪುತ್ತೂರು ರಸ್ತೆಯ ಬದನಾಜೆ ಎಂಬಲ್ಲಿ ರಸ್ತೆಗೆ ಮರವೊಂದು ಉರುಳಿ ಬಿದ್ದ ಪರಿಣಾಮ ಸಂಚಾರದಲ್ಲಿ ಕೆಲ ಸಮಯ ಅಡಚಣೆ ಉಂಟಾಗಿತ್ತು. ಅಳಕೆಮಜಲು ಜುಮಾ ಮಸೀದಿಯೊಂದರ ಕಾಂಪೌಂಡ್ ಮೇಲೆ ಮರ ಬಿದ್ದು ಹಾನಿಯಾಗಿದೆ.
ಅಡಕೆ ತೋಟ ಹಾನಿ: ಕೊಳ್ನಾಡು ಗ್ರಾಮದ ಸಾಲೆತ್ತೂರು ಸಮೀಪದ ಕಟ್ಟತ್ತಿಲ ಎಂಬಲ್ಲಿರುವ ಮೂರು ಅಡಕೆ ತೋಟದಲ್ಲಿರುವ ಸುಮಾರು ಅಂದಾಜು 175 ಅಡಕೆ ಮರಗಳು ಮುರಿದು ಬಿದ್ದಿವೆ. ಕಟ್ಟತ್ತಿಲ ಮಹಾಬಲ ಅಡ್ಯಂತಾಯ ಎಂಬವರ ತೋಟದಲ್ಲಿದ್ದ 50, ಜಯರಾಮ ಪೂಜಾರಿ ತೋಟದಲ್ಲಿದ್ದ 50 ಹಾಗೂ ಅದೇ ಪರಿಸರದ ಪುರುಷೋತ್ತಮ ಶೆಟ್ಟಿ ಅವರ ತೋಟದಲ್ಲಿದ್ದ 75 ಅಡಕೆ ಮರಗಳು ಸಂಪೂರ್ಣ ನೆಲಕಚ್ಚಿವೆ.