ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಪಾಯದಲ್ಲಿ ಸುಳ್ಯ-ಪುತ್ತೂರು ಹೆದ್ದಾರಿ

Lingaraj Badiger
Updated On : 13 Jun 2013, 11:50 am

ಸುಳ್ಯ: ಮಾಣಿ-ಮೈಸೂರು ರಸ್ತೆ ಕಾಮಗಾರಿ ಸಂದರ್ಭ ಪೈಚಾರಿನಲ್ಲಿ ಹೊಸ ಸೇತುವೆ ನಿರ್ಮಾಣಕ್ಕಾಗಿ ಹಳೆಯ ರಸ್ತೆಯ ಒಂದು ಪಾರ್ಶ್ವ ಕೆಡವಿ ಇನ್ನೊಂದು ಬದಿಯಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ರಸ್ತೆ ಭಾರಿ ಮಳೆಗೆ ಕುಸಿದು ಸಂಚಾರದಲ್ಲಿ ವ್ಯತ್ಯಯ ಉಂಟಾದ ಹಿನ್ನಲೆಯಲ್ಲಿ ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ.
ಸುಳ್ಯ-ಪುತ್ತೂರು ಮುಖ್ಯ ರಸ್ತೆಯ ಪೈಚಾರಿನಲ್ಲಿ ಹೊಸ ಸೇತುವೆ ಕಾಮಗಾರಿ ಆರಂಭಿಸುವುದಕ್ಕಾಗಿ ಪಕ್ಕದಲ್ಲಿ ಕಿರಿದಾದ ಮೋರಿ ಪೈಪುಗಳನ್ನು ಅಳವಡಿಸಿ ರಸ್ತೆಯನ್ನು ನಿರ್ಮಿಸಲಾಗಿತ್ತು. ಮಂಗಳವಾರ ಸುರಿದ ಭಾರಿ ಮಳೆಗೆ ಹೊಳೆಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಬಂದು ಮೋರಿಯಲ್ಲಿ ನೀರು ಹೋಗಲು ಸ್ಥಳಾವಕಾಶ ಸಾಕಾಗದೆ ರಸ್ತೆಯ ಎತ್ತರಕ್ಕೆ ತುಂಬಿತು. ಈ ನೀರು ರಸ್ತೆಯ ಒಂದು ಬದಿಯ ಮಣ್ಣನ್ನು ಕೊರೆದು ರಸ್ತೆಯ ಸಂಪರ್ಕ ಕಡಿತಗೊಂಡಿತು. ಈ ರಸ್ತೆಗೆ ರಸ್ತೆ ಕಾಮಗಾರಿ ಗುತ್ತಿಗೆದಾರರಾದ ಕೆ.ಎಂ.ಸಿ.ಯವರು ಒಂದು ಲೋಡ್ ಜಲ್ಲಿ ತಂದು ಸುರಿದರೂ ವಾಹನ ಸಂಚಾರ ಅಸಾಧ್ಯವಾಗಿದೆ. ಪಕ್ಕದಲ್ಲಿ ಸೇತುವೆ ಕಾಮಗಾರಿ ಆರಂಭಿಸುವುದಕ್ಕಾಗಿ ಇದ್ದ ಸೇತುವೆಯ ಅರ್ಧ ಭಾಗ ಒಡೆದು ತೆಗೆಯಲಾಗಿದ್ದು, ಒಂದು ಬಸ್ ಹೋಗುವಷ್ಟು ಅಗಲದ ಸೇತುವೆ ಮಾತ್ರ ಉಳಿದುಕೊಂಡಿದೆ.
ವಾಹನ ಸಂಚಾರ ಅಸಾಧ್ಯ: ಅತ್ತ ಹೊಸ ಸೇತುವೆಯ ಕಾಮಗಾರಿ ಕೂಡಾ ಆರಂಭಗೊಂಡಿಲ್ಲ. ಪರ್ಯಾಯ ರಸ್ತೆಯಲ್ಲಿ ವಾಹನ ಸಾಗುವುದು ಅಸಾಧ್ಯವಾಗಿದ್ದು ಅರ್ಧ ಸೇತುವೆಯಲ್ಲೇ ಎಲ್ಲಾ ವಾಹನಗಳು ಸಾಗಬೇಕಾದ ಪರಿಸ್ಥಿತಿ ಸೃಷ್ಟಿಯಾಗಿರುವುದರಿಂದ ಅದು ಕೂಡಾ ಒಂದೆರಡು ದಿನದಲ್ಲಿ ಕುಸಿಯಬಹುದೆಂಬ ಆತಂಕ ಎದುರಾಗಿದೆ. ಇದೂ ಕುಸಿದರೆ ಮಾಣಿ-ಮೈಸೂರು ಮುಖ್ಯರಸ್ತೆಯೇ ಸಂಪರ್ಕ ಕಡಿತಗೊಳ್ಳುತ್ತದೆ. ವಾಹನಗಳು ಉಬರಡ್ಕ ಮತ್ತು ಅಜ್ಜಾವರ ಮಾರ್ಗವಾಗಿ ಸಾಗಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗುತ್ತದೆ.
ಪ್ರತಿಭಟನೆ: ಕಾಮಗಾರಿಯ ಆರಂಭದಲ್ಲೇ ಜನ ಸೂಚನೆ ಕೊಟ್ಟರೂ ಗಣನೆಗೆ ತೆಗೆದುಕೊಳ್ಳದೆ ಈ ರೀತಿಯ ಅವೈಜ್ಞಾನಿಕ ಕಾಮಗಾರಿ ನಡೆಸಿ ಸಂಕಷ್ಟಕ್ಕೆ ಕಾರಣರಾಗಿರುವ ಕೆ.ಎಂ.ಸಿ. ಮತ್ತು ಕೆ.ಆರ್.ಡಿ.ಸಿ.ಎಲ್. ವಿರುದ್ಧ ಜನರು ಬುಧವಾರ ಬೆಳಗ್ಗೆ ಸ್ಥಳದಲ್ಲಿ ಸೇರಿ ಪ್ರತಿಭಟಿಸಿದರು.
ಸ್ಥಳಕ್ಕೆ ಬಂದ ತಹಸೀಲ್ದಾರ್ ವೇಣುಗೋಪಾಲ್ ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ ಸುದರ್ಶನ್ ಕೆ.ಎಂ.ಸಿ.ಯ ಸೈಟ್ ಸೂಪರ್‌ವೈಸರನ್ನು ಕರೆಸಿ ಪರ್ಯಾಯ ರಸ್ತೆಯ ಅಡಿಭಾಗದಲ್ಲಿ ನೀರು ಹೋಗಲು ಅಳವಡಿಸಿರುವ ಕಿರಿದಾದ ಪೈಪುಗಳನ್ನು ತೆಗೆಸಿ ದೊಡ್ಡ ಪೈಪುಗಳನ್ನು ಅಳವಡಿಸಿ ರಸ್ತೆ ನಿರ್ಮಿಸುವಂತೆ ಸೂಚಿಸಿದರು. ಅದನ್ನು ಕೆ.ಎಂ.ಸಿ. ಎಂಜಿನಿಯರ್ ಒಪ್ಪಿ ಕೆಲಸ ಆರಂಭಿಸುವುದಾಗಿ ತಿಳಿಸಿದ್ದಾರೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement