ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಂತ್ರಸ್ತ ಬಾಲಕಾರ್ಮಿಕರಿಗೆ ಪುನರ್ವಸತಿ ಅಗತ್ಯ: ನ್ಯಾ. ಅರುಣ್

Lingaraj Badiger
Updated On : 13 Jun 2013, 11:47 am

ಮಂಗಳೂರು: ಗ್ಯಾರೇಜ್, ಹೊಟೇಲ್ ಮತ್ತಿತರ ಕಡೆಗಳಲ್ಲಿ ಬಾಲಕಾರ್ಮಿಕರು ಬಳಕೆಯಾಗುತ್ತಿದ್ದು, ಕುಟುಂಬದಲ್ಲಿನ ಬಡತನ ಇದಕ್ಕೆ ಕಾರಣ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಲ್ಲದೆ, ಸಂತ್ರಸ್ತ ಬಾಲಕಾರ್ಮಿಕರಿಗೆ ಸೂಕ್ತ ಪುನರ್ವಸತಿ ಕಲ್ಪಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಚೌಡಪುರ್‌ಕರ್ ಅರುಣ್ ಹೇಳಿದ್ದಾರೆ.
ಅವರು ಬುಧವಾರ ಮಂಗಳೂರು ಪುರಭವನದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಮತ್ತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಬಾಲಕಾರ್ಮಿಕರ ಸಂಖ್ಯೆ ಇಳಿಮುಖವಾದ್ದು ಉತ್ತಮ ಬೆಳವಣಿಗೆ. ಬಾಲಕಾರ್ಮಿಕರಿಗೆ ಕಡಿವಾಣ ಹಾಕಬೇಕು ಎಂದು ಹೇಳಿದರು.
ದ.ಕ.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ವಿಜಯ ಪ್ರಕಾಶ್ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ಮಾತನಾಡಿ, ಬಾಲಕಾರ್ಮಿಕ ಮುಕ್ತ ಜಿಲ್ಲೆಯಾಗಿ ಮಾಡುವ ಇಂಗಿತ ವ್ಯಕ್ತಪಡಿಸಿದರು. ಮಕ್ಕಳಲ್ಲಿ ಬಾಲಕಾರ್ಮಿಕರ ಬಗ್ಗೆ ಅರಿವು ಮೂಡಬೇಕು. ರಾಜ್ಯದಲ್ಲೇ ಅತಿ ಕನಿಷ್ಠ ಬಾಲಕಾರ್ಮಿಕರಿರುವುದು ದ.ಕ.ದಲ್ಲಿ. ಇದಕ್ಕೆ ಜಿಲ್ಲೆಯ ಪರಿಸ್ಥಿತಿ ಕಾರಣ ಎಂದರು.
ಕಾನೂನು ಬಿಗಿಯಾಗಲಿ: ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಆಶಾ ನಾಯಕ್ ಮಾತನಾಡಿ, ನಾವು ಮಕ್ಕಳನ್ನು ಸರಕಾಗಿ ಕಾಣಬಾರದು. ಮಕ್ಕಳಿಗೆ ಪೂರಕ ಕಾನೂನು ಇದ್ದು, ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆ ಅಧಿಕಾರಿಗಳ ಮನೆಯಲ್ಲೇ ಬಾಲಕಾರ್ಮಿಕರು ಸಿಕ್ಕಿದ ಪ್ರಕರಣ ಜಾಸ್ತಿ ಇದೆ. ಮಾಧ್ಯಮಗಳು ಬಾಲಕಾರ್ಮಿಕರು ಪತ್ತೆಯಾದಾಗ ಆರೋಪಿಗಳ ಹೆಸರನ್ನು ಹಾಕಬೇಕು. ಬಾಲಕಾರ್ಮಿಕರಾಗಿ ದುಡಿಸಿದವರನ್ನು ಬಂಧಿಸುವಂತಾಗಬೇಕು. ಈ ನಿಟ್ಟಿನಲ್ಲಿ ಕಾನೂನು ಬಿಗಿಯಾಗಬೇಕು ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿ ಪ್ರಕಾಶ್ ಮಾತನಾಡಿ, ಬಾಲಕಾರ್ಮಿಕ ನಿರ್ಮೂಲನೆಗೆ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಜನತೆ ಪ್ರಜ್ಞಾವಂತರಿದ್ದು, ಬಾಲಕಾರ್ಮಿಕರ ಸಂಖ್ಯೆ ಶೇ.5ರಿಂದ 10ರಷ್ಟಿದೆ. ಬಾಲಕಾರ್ಮಿಕರ ಪೂರ್ತಿ ನಿರ್ಮೂಲನೆಗೆ ಜಿಲ್ಲಾಡಳಿತ ಬದ್ಧವಾಗಿದ್ದು, ಬಾಲಕಾರ್ಮಿಕರು ಕಂಡಬಂದರೆ ತನ್ನ ಸಹಿತ ಇತರೆ 12 ಇಲಾಖೆಗಳ ಗಮನಕ್ಕೆ ತರಬಹುದು ಎಂದರು.  ಪ್ರಸ್ತುತ ಪಿಯುಸಿ ಕಲಿಯುತ್ತಿರುವ ಚಿತ್ರದುರ್ಗದ ವಿದ್ಯಾರ್ಥಿನಿ ಗೀತಾ, ತಾನು ಬಾಲಕಾರ್ಮಿಕಳಾಗಿ ಪಾರಾಗಿ ಈಗ ವಿದ್ಯಾಭ್ಯಾಸ ಪಡೆಯುತ್ತಿರುವ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಕೂಲಿ ಬದುಕಿನಿಂದ ಶಾಲೆಗೆ ತೆರಳುತ್ತಿರುವ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‌ನ ಮಕ್ಕಳಿಗೆ ಉಚಿತ ಬ್ಯಾಗ್ ವಿತರಿಸಲಾಯಿತು.   ಮಂಗಳೂರು ವಕೀಲರ ಸಂಘ ಅಧ್ಯಕ್ಷ ಅಶೋಕ ಆರಿಗ, ಮಹಾನಗರ ಪಾಲಿಕೆ ಜಂಟಿ ಆಯುಕ್ತ ಶ್ರೀಕಾಂತ್ ರಾವ್, ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ್, ಅಧಿಕಾರಿ ಜ್ಞಾನೇಶ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement