ಸುಳ್ಯ ಪದವಿ ಪೂರ್ವ ಕಾಲೇಜು ವಾಣಿಜ್ಯ ವಿಭಾಗ ಸ್ಥಳಾಂತರ ರದ್ದು
ಸುಳ್ಯ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ 2 ವಿಭಾಗಗಳಲ್ಲಿ ಒಂದನ್ನು ಗಾಂಧಿನಗರ ಸ.ಪ.ಪೂ. ಕಾಲೇಜಿಗೆ ಸ್ಥಳಾಂತರಿಸಿ ಕಳೆದ ತಿಂಗಳು ಮಾಡಿದ್ದ ಆದೇಶವನ್ನು ಪ.ಪೂ. ಶಿಕ್ಷಣ ಇಲಾಖೆ ರದ್ದುಪಡಿಸಿದ್ದು ವಿದ್ಯಾರ್ಥಿಗಳು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.
ಸುಳ್ಯ ಜೂನಿಯರ್ ಕಾಲೇಜು ಆರಂಭಗೊಳ್ಳುವಾಗ ಇದ್ದ ವಾಣಿಜ್ಯ ವಿಭಾಗದ ಜತೆಗೆ, 2009ರಲ್ಲಿ ಧಾರವಾಡದ ದೇವ ಹುಬ್ಬಳ್ಳಿಯಿಂದ ಸ್ಥಳಾಂತರಗೊಂಡು ಬಂದ ವಾಣಿಜ್ಯ ವಿಭಾಗ ಕೂಡ ಆರಂಭಗೊಂಡಿತ್ತು. ಒಂದೊಂದು ವಿಭಾಗದ ತಲಾ 100ರಂತೆ 200 ಮಕ್ಕಳನ್ನು ಪ್ರಥಮ ಪಿಯುಸಿ ವಾಣಿಜ್ಯ ವಿಭಾಗಕ್ಕೆ 2009ರಿಂದ ತೆಗೆದುಕೊಳ್ಳಲಾಗುತ್ತಿತ್ತು.
ದೇವ ಹುಬ್ಬಳ್ಳಿಯಿಂದ ಬಂದ ಈ ಸೆಕ್ಷನನ್ನು ಹುದ್ದೆ ಸಮೇತ ಗಾಂಧಿನಗರ ಜೂನಿಯರ್ ಕಾಲೇಜಿಗೆ ಸ್ಥಳಾಂತರಿಸಿ ಕಳೆದ ವಾರ ಆದೇಶ ಬಂದುದರಿಂದ ಗೊಂದಲ ನಿರ್ಮಾಣವಾಗಿತ್ತು.
ವಿದ್ಯಾರ್ಥಿ ಸಂಘಟನೆಗಳು ಇದನ್ನು ವಿರೋಧಿಸಿದ್ದವು. ಶಾಸಕರು ಕೂಡಾ ಈ ಬಗ್ಗೆ ವಿಧಾನಸಭೆಯಲ್ಲಿ ಶಿಕ್ಷಣ ಸಚಿವರ ಗಮನ ಸೆಳೆದು ಇದನ್ನು ಸರಿಪಡಿಸುವಂತೆ ಕೋರಿದ್ದರು. ಗಾಂಧಿನಗರಕ್ಕೆ ಬೇರೆಯೇ ವಾಣಿಜ್ಯ ವಿಭಾಗ ಮಂಜೂರು ಮಾಡುವಂತೆ ಅವರು ಹೇಳಿದ್ದರು. ಕಾಂಗ್ರೆಸ್ ನಾಯಕರು ಕೂಡಾ ಸಚಿವರಲ್ಲಿ ಹಕ್ಕೊತ್ತಾಯ ಮಂಡಿಸಿದರು.
ಇದೀಗ ಜಂಟಿ ನಿರ್ದೇಶಕರಿಂದ ಆದೇಶ ಫ್ಯಾಕ್ಸ್ ಮೂಲಕ ಜೂನಿಯರ್ ಕಾಲೇಜಿಗೆ ಬಂದಿದ್ದು, ದೇವ ಹುಬ್ಬಳ್ಳಿಯಿಂದ ಸುಳ್ಯ ಜೂನಿಯರ್ ಕಾಲೇಜಿಗೆ 2009ರಲ್ಲಿ ಸ್ಥಳಾಂತರಗೊಂಡು ಬಂದಿರುವ ವಾಣಿಜ್ಯ ವಿಭಾಗವನ್ನು ಹುದ್ದೆ ಸಮೆತ ಸುಳ್ಯ ಪಟ್ಟಣ (ಗಾಂಧಿನಗರ) ಜೂನಿಯರ್ ಕಾಲೇಜಲ್ಲೇ ಉಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇಲ್ಲಿ 2 ಉಪನ್ಯಾಸಕರ ಹುದ್ದೆ ಅಗತ್ಯವಿದೆ ಎಂದು ಜಿಲ್ಲಾ ಉಪ ನಿರ್ದೇಶಕರು ವರದಿ ನೀಡಿರುವ ಹಿನ್ನೆಲೆಯಲ್ಲಿ ಹಿಂದಿನ ಆದೇಶ ರದ್ದುಪಡಿಸಿ ಸುಳ್ಯ ಜೂನಿಯರ್ ಕಾಲೇಜ್ನಲ್ಲಿ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಕಾಮರ್ಸ್ ವಿಭಾಗಕ್ಕೆ ವಿದ್ಯಾರ್ಥಿಗಳನ್ನು ಸೇರಿಸಿಕೊಂಡಿದ್ದರೆ, ಆ ವಿದ್ಯಾರ್ಥಿಗಳನ್ನು ಸುಳ್ಯ ಜೂನಿಯರ್ ಕಾಲೇಜಿಗೆ ಸೇರಿಸಬೇಕೆಂದು ಆ ಆದೇಶದಲ್ಲಿ ತಿಳಿಸಲಾಗಿದೆ.
ಗಾಂಧಿನಗರದಲ್ಲಿ ಪ್ರವೇಶ: ಸ್ಥಳಾಂತರ ಆದೇಶ ಹಿನ್ನೆಲೆಯಲ್ಲಿ ಗಾಂಧಿನಗರ ಜೂನಿಯರ್ ಕಾಲೇಜಿನಲ್ಲಿ ಕಾಮರ್ಸ್ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಆರಂಭಿಸಲಾಗಿತ್ತು. ಒಟ್ಟು 35 ವಿದ್ಯಾರ್ಥಿಗಳು ಕಾಮರ್ಸ್ ವಿಭಾಗಕ್ಕೆ ಸೇರಿಸಿಕೊಳ್ಳಲಾಗಿದೆ. ಇದೀಗ ಸ್ಥಳಾಂತರ ಆದೇಶ ರದ್ದಾಗಿರುವುದರಿಂದ, ಈ ವಿದ್ಯಾರ್ಥಿಗಳು ತ್ರಿಶಂಕು ಸ್ಥಿತಿ ಅನುಭವಿಸುವಂತಾಗಿದೆ.